ವಿಶ್ವಸಂಸ್ಥೆ: ಹೆಚ್ಚಿನ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವವನ್ನು ನೀಡುವುದನ್ನು ವಿರೋಧಿಸಿರುವ ಪಾಕಿಸ್ತಾನ, ವಿಶ್ವಸಂಸ್ಥೆಯ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದೆ.
ವಿಶ್ವ ಸಂಸ್ಥೆಯ 75ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಮಗೆ ಎಂತಹ ವಿಶ್ವಸಂಸ್ಥೆ ಬೇಕು ಎಂಬ ವಿಚಾರವನ್ನು ಕುರಿತು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯು ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಪಾಕಿಸ್ತಾನ ಈ ವಿಚಾರ ಪ್ರಸ್ತಾಪಿಸಿದೆ.
ಬಲಾತ್ಕಾರ, ಶಕ್ತಿಯ ಅನಿಯಂತ್ರಿತ ಬಳಕೆಯ ಮೂಲಕ ವಿಶ್ವಸಂಸ್ಥೆ ಹಾಗೂ ಬಹುಪಕ್ಷೀಯತೆಯ ಪರಿಕಲ್ಪನೆಯನ್ನೇ ಬುಡಮೇಲು ಮಾಡಲಾಗುತ್ತಿದೆ. ಪಾಕಿಸ್ತಾನವು ವಿಶೇಷವಾಗಿ ಜಮ್ಮು ಕಾಶ್ಮೀರದ ಜನರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಹಾಗೂ ದೌರ್ಜನ್ಯದ ಬಗ್ಗೆ ಚಿಂತಿತವಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಮೊಹಮ್ಮದ್ ಖುರೇಷಿ ಹೇಳಿದ್ದಾರೆ.
ಅಧಿಕಾರ ಮತ್ತು ಸವಲತ್ತುಗಳ ಸಂಕುಚಿತ ಮಹತ್ವಾಕಾಂಕ್ಷೆ ಹೊಂದಿರುವ ರಾಷ್ಟ್ರಗಳಿಗೆ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ ನೀಡುವುದು ಸರಿಯಲ್ಲ. ಇದರಿಂದ ಭದ್ರತಾ ಮಂಡಳಿಗೇ ಅಪಾಯವಿದೆ’ ಎಂದು ಖುರೇಷಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ, ಜಮ್ಮು ಕಾಶ್ಮೀರ ನಮ್ಮ ಆಂತರಿಕ ವಿಚಾರ. ಈ ರಾಜ್ಯವು ಭಾರತ ಅವಿಭಾಜ್ಯ ಅಂಗ. ಇದು ಮುಂದೆಯೂ ಹಾಗೆ ಇರಲಿದೆ ಎಂದು ಸ್ಪಷ್ಟಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ವಿಶ್ವಸಂಸ್ಥೆಗೆ ಹೊಸ ರೂಪ ನೀಡುವ ಅಗತ್ಯತೆಗೆ ಕೋವಿಡ್–19 ಸಾಕ್ಷಿಯಾಗಿದೆ. ಬಹುಪಕ್ಷೀಯ ವ್ಯವಸ್ಥೆಯನ್ನು ಸುಧಾರಿಸಲು ಎಲ್ಲಾ ರಾಷ್ಟ್ರಗಳು ಪ್ರತಿಜ್ಞೆ ಮಾಡಬೇಕಾಗಿದೆ. ಹೊಸರೂಪದ ವಿಶ್ವ ಸಂಸ್ಥೆ ಜಗತ್ತಿನ ನಿರೀಕ್ಷೆ ಈಡೇರಿಸಬಲ್ಲದು ಎಂದರು.
ಜಮ್ಮು ಕಾಶ್ಮೀರ ಸೇರಿದಂತೆ ಭಾರತದ ಆಂತರಿಕ ವಿಚಾರಗಳನ್ನು ವಿಶ್ವ ಸಂಸ್ಥೆಯ ಎಲ್ಲಾ ವೇದಿಕೆಗಳಲ್ಲೂ ಪ್ರಸ್ತಾಪಿಸುವ ಮೂಲಕ ಪಾಕಿಸ್ತಾನವು ಭಾರತದ ವಿರುದ್ಧ ಅಭಿಪ್ರಾಯ ಸಂಗ್ರಹಿಸುವ ಪ್ರಯತ್ನ ಮಾಡುತ್ತಿದೆ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ವಿಚಾರವನ್ನು ವಿಶೇಷವಾಗಿ ಅದು ಪ್ರಸ್ತಾಪಿಸುತ್ತಾ ಬಂದಿದೆ. ಆದರೆ ಇದು ತನ್ನ ಆಂತರಿಕ ವಿಚಾರ ಎಂಬುದನ್ನು ಭಾರತ ಅಷ್ಟೇ ಪ್ರಬಲವಾಗಿ ಎಲ್ಲಾ ವೇದಿಕೆಗಳಲ್ಲಿ ಪ್ರತಿಪಾದಿಸುತ್ತಾ ಬಂದಿದೆ ಎಂದು ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ಧಾರೆ.