ಆಕ್ಲೆಂಡ್: ಇಡೀ ಜಗತ್ತನ್ನೇ ಮಹಾಮಾರಿಯಂತೆ ಕಾಡುತ್ತಿರುವ ಕೊರೊನಾ ವೈರಸ್, ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಆದರೆ, ಇಂತಹ ಕಿಲ್ಲರ್ ಕೋವಿಡ್ ವಿರುದ್ಧ ಹೋರಾಟದಲ್ಲಿ ನ್ಯೂಜಿಲೆಂಡ್ ಜಯ ಸಾಧಿಸಿದೆ.
ಇಡೀ ನ್ಯೂಜಿಲೆಂಡ್‌ನಲ್ಲಿ ಈಗ ಕೇವಲ ಒಂದೇ ಒಂದು ಸಕ್ರಿಯ ಕೋವಿಡ್ ಪ್ರಕರಣ ಮಾತ್ರ ಬಾಕಿ ಇದ್ದು, ಈ ಮೂಲಕ ಜಗತ್ತಿನಲ್ಲಿಯೇ ಮೊದಲ ಕೊರೊನಾ ಮುಕ್ತ ರಾಷ್ಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ 8 ದಿನಗಳಿಂದ ಅಲ್ಲಿ ಒಂದೇ ಒಂದು ಹೊಸ ಪ್ರಕರಣವೂ ಪತ್ತೆಯಾಗಿಲ್ಲ. ಆದರೂ ನ್ಯೂಜಿಲೆಂಡ್ ಕೊರೊನಾ ವೈರಸ್ ಮೇಲೆ ಹದ್ದಿನ ಕಣ್ಣಿಟ್ಟಿದೆ.
ನ್ಯೂಜಿಲೆಂಡ್‌ನಲ್ಲಿ ಈವರೆಗೆ 1504 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ಈ ಪೈಕಿ 1481 ಮಂದಿ ಗುಣಮುಖರಾಗಿದ್ದು, 22 ಮಂದಿ ಸಾವಿಗೀಡಾಗಿದ್ದಾರೆ. ಒಬ್ಬರು ಸದ್ಯ ಆಸ್ಪತ್ರೆಯಲ್ಲಿದ್ದಾರೆ. ಈ 8 ದಿನಗಳಲ್ಲಿ ಅಲ್ಲಿ ಒಂದೂ ಸಾವು ಸಂಭವಿಸಿಲ್ಲ. ಸೋಂಕು ಪ್ರಕರಣಗಳು ಕಂಡು ಬಾರದ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ಕೋವಿಡ್ ನಿಯಂತ್ರಣಾ ಕ್ರಮಗಳನ್ನು ಸಡಿಲಗೊಳಿಸಲು ಮುಂದಾಗಿದೆ.

ಇಡೀ ದೇಶದಲ್ಲಿ 2,78,872 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನು ಪರೀಕ್ಷೆಗಳು ನಡೆಯುತ್ತಿವೆ. ಫೆ.28ರಂದು ಅಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿತ್ತು. ಮಾರ್ಚ್ 26ರಿಂದ ಸಂಪೂರ್ಣ ಲಾಕ್‌ಡೌನ್ ಜಾರಿಗೆ ತಂದಿತ್ತು.



