ಹೊಸದಿಲ್ಲಿ: ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಭಾರತೀಯ ರೈಲ್ವೆ ಶೀಘ್ರವೇ ದರ ಏರಿಕೆ ಮಾಡಲು ಸಿದ್ದತೆ ನಡೆಸಿದೆ. ಈ ಕುರಿತು ಗುರುವಾರ ಹೇಳಿಕೆ ನೀಡಿರುವ ರೈಲ್ವೇ ಮಂಡಳಿ ಅಧ್ಯಕ್ಷ ವಿಕೆ ಯಾದವ್, ರೈಲ್ವೆ ತನ್ನ ಪ್ರಯಾಣಿಕರು ಮತ್ತು ಸರಕು ಸಾಗಣೆ ದರವನ್ನು ಶುಲ್ಕವನ್ನು ನಿರ್ಧಿಷ್ಟಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ರೈಲ್ವೆ ಇಲಾಖೆ
ವಾರ್ಷಿಕ ಖರ್ಚು 2.18 ಲಕ್ಷ ಕೋಟಿ
ವಾರ್ಷಿಕ ಆದಾಯ 2 ಲಕ್ಷ ಕೋಟಿ
ಪ್ರಯಾಣ ದರಗಳು ಮತ್ತು ಸರಕು ದರಗಳನ್ನು ತರ್ಕಬದ್ಧಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಇದು ಸೂಕ್ಷ್ಮ ವಿಷಯ. ಸರಕು ಸಾಗಣೆ ದರಗಳು ಈಗಾಗಲೇ ಹೆಚ್ಚಾಗಿದ್ದರೂ, ಈ ನಿಟ್ಟಿನಲ್ಲಿ ರಸ್ತೆಯಿಂದ ರೈಲ್ವೆಗೆ ಹೆಚ್ಚಿನ ದಟ್ಟಣೆಯನ್ನು ಸೆಳೆಯುವುದು ನಮ್ಮ ಗುರಿಯಾಗಿದೆ ಎಂದಿದ್ದಾರೆ.
ರೈಲ್ವೇ ಪ್ರಯಾಣ ದರ ಏರಿಕೆ ಮಾಡುವ ಯಾವುದೇ ಪ್ರಸ್ತಾವನೆಗಳಿಲ್ಲ. ಪ್ರಯಾಣ ದರವನ್ನು ತರ್ಕಬದ್ಧಗೊಳಿಸುವುದಷ್ಟೇ ಉದ್ದೇಶ, ಇದರಿಂದ ದರ ಇಳಿಕೆಯೂ ಆಗಬಹುದು ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ.ಅಕ್ಟೋಬರ್ 23ರಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಮಂತ್ರಿ ಕಚೇರಿ ಪ್ರಯಾಣ ದರಗಳನ್ನು ಹಂತ ಹಂತವಾಗಿ ಏರಿಕೆ ಮಾಡಲು ಇರುವ ಆಯ್ಕೆಗಳ ಬಗ್ಗೆ ಗಮನ ಹರಿಸುವಂತೆ ಸೂಚನೆ ನೀಡಿತ್ತು.
ಸದ್ಯ ರೈಲ್ವೆ ಇಲಾಖೆಯ ವಾರ್ಷಿಕ ಖರ್ಚು 2.18 ಲಕ್ಷ ಕೋಟಿ ರೂಪಾಯಿ ಇದ್ದರೆ, ಆದಾಯ 2 ಲಕ್ಷ ಕೋಟಿ ರೂಪಾಯಿ ಮಾತ್ರ ಇದೆ. ಆದಾಯದಲ್ಲಿ 50 ಸಾವಿರ ಕೋಟಿ ರೂಪಾಯಿ ಕೇವಲ ಪಿಂಚಣಿಗೆ ಹೋಗುತ್ತಿದೆ. ಒಂದೊಮ್ಮೆ ಹಣಕಾಸು ಇಲಾಖೆ ಇದರ ಜವಾಬ್ದಾರಿ ವಹಿಸಿಕೊಂಡರೆ ನಮಗೆ ಹೆಚ್ಚಿನ ಅನುಕೂಲವಾಗಲಿದೆ ಎಂದಿದ್ದಾರೆ. ಆದರೆ ಸದ್ಯಕ್ಕೆ ಹಣಕಾಸು ಇಲಾಖೆ ಈ ಹೊರೆಯನ್ನು ಹೊರಲೂ ಸಿದ್ದವಿಲ್ಲ.



