ಡಿವಿಜಿ ಸುದ್ದಿ,ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆಯ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಇಂದು ಸಿಸಿಬಿ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಐದುವರೆ ತಾಸುಗಳ ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ ನೀಡಿದ್ದಾರೆ.
ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಇಂದ್ರಜಿತ್ ಲಂಕೇಶ್ , ನನಗೆ ಗೊತ್ತಿರುವ ಮಾಹಿತಿ ಬಗ್ಗೆ ಸಾಕ್ಷಿ ಸಮೇತ ಹೇಳಿದ್ದೇನೆ. ನನ್ನ ಹೇಳಿಕೆಗೆ ನಾನು ಈಗಳೂ ಬದ್ಧನಾಗಿದ್ದು, ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ನಿನ್ನೆ ಮೊನ್ನೆ ಬಂದ ಕೆಲ ನಟ, ನಟಿಯರು ಡ್ರಗ್ಸ್ ಗೆ ರಾಯಭಾರಿಗಳಾಗಿದ್ದಾರೆ. ಇದರಿಂದ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಯುವ ಜನತೆ ಹಾನಿಯಾಗಿದೆ.

ವಿಚಾರಣೆ ಸಂದರ್ಭದಲ್ಲಿ ಒಟ್ಟು 10 ರಿಂದ 15 ಮಂದಿ ಹೆಸರು, ಕೆಲ ಸ್ಥಳಗಳ ಮಾಹಿತಿ, ಆ ಬಗ್ಗೆ ಬೇಕಾದ ದಾಖಲೆಗಳನ್ನು ನೀಡಿದ್ದೇನೆ. ಈಗಾಗಲೇ ಪೊಲೀಸರ ಬಳಿಯೂ ಸಾಕಷ್ಟು ಮಾಹಿತಿ ಇದೆ. ಆದರೆ ನಾನು ಈಗ ಅವರ ಹೆಸರು ಬಹಿರಂಗ ಪಡಿಸಿದರೆ ತನಿಖೆಗೆ ತೊಂದರೆ ಆಗಲಿದೆ. ಸುಮಾರು ಐದೂವರೆ ಗಂಟೆ ಅವಧಿಯಲ್ಲಿ ಹಲವು ಸಾಕ್ಷಿ, ದಾಖಲೆ, ವಿಡಿಯೋಗಳನ್ನು ನೀಡಿದ್ದೇನೆ ಎಂದು ತಿಳಿಸಿದರು.
ತಮ್ಮ ಹೇಳಿಕೆಗಳ ವಿರುದ್ಧ ಕೇಳಿ ಬಂದ ಟೀಕೆಗಳ ಕುರಿತು ಪ್ರತಿಕ್ರಿಯೆ ನೀಡಿದ ಇಂದ್ರಜಿತ್ ಲಂಕೇಶ್ ಅವರು, ಸಮಾಜದಲ್ಲಿ ಹೆಸರು ಮಾಡಿದ ಸಾಹಿತಿಗಳು, ಗಣ್ಯರನ್ನು ಕರೆಯಿಸಿ ಮಾಧ್ಯಮಗಳು ವರದಿ ಮಾಡಬೇಕು. ಅದನ್ನು ಬಿಟ್ಟು ಸುಪಾರಿ ಕೊಟ್ಟ ವ್ಯಕ್ತಿಗಳ ಹೇಳಿಕೆ ಕೇಳಬೇಡಿ ಎಂದು ಸಲಹೆ ನೀಡಿದರು.

ನಾನು ರಕ್ಷಣೆ ಬೇಕು ಎಂದು ಕೇಳಿಲ್ಲ. ಬೆಂಬಲ ಬೇಕು ಎಂದು ಕೇಳಿದ್ದೇನೆ. ನಾನು ಈಗ ಪೊಲೀಸರಿಗೆ ಮಾಹಿತಿ ನೀಡಿರುವುದರಿಂದ ಅವರಿಗೆ ಖುಷಿ ಆಗಿದೆ. ಶೀಘ್ರವೇ ಅಧಿಕಾರಿಗಳು ಈ ಬಗ್ಗೆ ತನಿಖೆ ಸಮೇತ ಹೆಸರು ಬಹಿರಂಗಪಡಿಸಲಿದ್ದಾರೆ. ನನಗೆ ಯಾವುದೇ ನಟರು, ರಾಜಕಾರಣಿಗಳ ಮಕ್ಕಳ ಬಗ್ಗೆ ಹೆದರಿಕೆ ಇಲ್ಲ.
ನಾನು ಈ ಬಗ್ಗೆ ಸಾಕಷ್ಟು ತನಿಖೆ ನಡೆಸಿದ್ದು, ಆ ವೇಳೆ ಲಭ್ಯವಾದ ಕೆಲ ವಿಡಿಯೋ, ದಾಖಲೆಗಳನ್ನು ನೀಡಿದ್ದೇನೆ. ನನಗೆ ಯಾರು ಒತ್ತಡ ಹಾಕುತ್ತಿಲ್ಲ. ಹಲವು ನಿರ್ಮಾಪಕರು, ನಟರು, ರಾಜಕಾರಣಿಗಳು, ಸಾಮಾನ್ಯ ಜನರು ನನಗೆ ಬೆಂಬಲ ನೀಡಿದ್ದಾರೆ ಅವರಿಗೆ ಧನ್ಯವಾದ ಎಂದರು.



