ಡಿವಿಜಿ ಸುದ್ದಿ, ಹಾವೇರಿ: ಈ ಬಾರಿಯ ರಾಜ್ಯ ಬಜೆಟ್‍ನಲ್ಲಿ ಮಹಿಳಾ ಮೀನುಗಾರರಿಗೆ ದ್ವಿಚಕ್ರ ವಾಹನ, ವಿವಿಧ ಜಿಲ್ಲೆಯಲ್ಲಿ ಮತ್ಯ ದರ್ಶನಿ ಹೋಟೆಲ್ ತೆರೆಯಲು ಯೋಜನೆ ರೂಪಿಸಿದೆ . ಈ ಮೂಲಕ ಮೀನಿನ ಪ್ರಿಯರಿಗೆ ರಾಜ್ಯ ಸರ್ಕಾರ ಬಂಪರ್ ಆಫರ್ ನೀಡಲು ಸಿದ್ಧತೆ ನಡೆಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಹಿಳಾ ಮೀನುಗಾರರಿಗೆ ದ್ವಿಚಕ್ರ ವಾಹನ ವಿತರಿಸುವ ಯೋಜನೆಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಮೀನುಗಾರಿಕೆ ಇಲಾಖೆಯಿಂದ ಮತ್ಸದರ್ಶಿನಿ ಯೋಜನೆಯಡಿ ವಿವಿಧ ಜಿಲ್ಲೆಯಲ್ಲಿ ಹೋಟೆಲ್ ತೆರೆಯಲಾಗುವುದು. ಮೀನು ಖಾದ್ಯ ಪ್ರಿಯರಿಗೆ ಮತ್ಸ ದರ್ಶನಿ ಮೂಲಕ ಊಟ ಸವಿಯಬಹುದು ಎಂದರು.
ಮೀನು ಸಾಕಾಣಿಕೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಕೆರೆ ಮತ್ತು ಜಲಾಶಯಗಳನ್ನು ಗುತ್ತಿಗೆ ನೀಡುವ ಪದ್ಧತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು. ಜಲಮೂಲಗಳ ವಿಲೇವಾರಿಗೆ ರಾಜ್ಯದಲ್ಲಿ ಹೊಸ ಸೂತ್ರ ಅಳವಡಿಸಿಕೊಳ್ಳಲಾಗುವುದು. ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗುವುದು. ಟೆಂಡರ್ ಕರೆಯಬೇಕಾ ಅಥವಾ ಪಂಚಾಯಿತಿ ಮಟ್ಟದಲ್ಲಿ ಹರಾಜು ಹಾಕಬೇಕಾ ಎಂಬ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನು ಮುಖಸ್ಥರನ್ನಾಗಿ ಮಾಡಿ, ಎ, ಬಿ ಹಾಗೂ ಸಿ ದರ್ಜೆಯ ಕೆರೆಗಳನ್ನಾಗಿ ವರ್ಗೀಕರಿಸಲಾಗುವುದು.
ಮೀನುಗಾರರ ಸಂಘ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಆರ್ಥಿಕ ದುರ್ಬಲರಿಗೂ ಇಂತಿಷ್ಟು ಕೆರೆಗಳೆಂದು ಮೀಸಲಿರಿಸಿ ಗುತ್ತಿಗೆ ನೀಡಲಾಗುವುದು. ಕೆರೆಗಳ ವರ್ಗೀಕರಣ ಕಾರ್ಯ ಹಾವೇರಿ ಜಿಲ್ಲೆಯಿಂದ ಆರಂಭಿಸಲಾಗುವುದು ಎಂದರು.