ಡಿವಿಜಿ ಸುದ್ದಿ, ಹರಿಹರ: ತಾಲ್ಲೂಕಿನಲ್ಲಿ ಸುರಿದ ಭಾರೀ ಮಳೆ ಮನೆ, ಹೊಲ, ಗದ್ದೆಗಳಿಗೆ ನೀರು ನುಗ್ಗಿ ನೆರೆ ಸಂತ್ರಸ್ತರಾಗಿದ್ದವರಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪರಿಹಾರ ಕಿಟ್ ವಿತರಿಸಿದರು.
ನಗರದ ಶಿಕ್ಷಕರ ಭವನದಲ್ಲಿ ಜಿಲ್ಲಾ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಪತ್ತಿನ ಸಹಕಾರಿ ಸಂಘದ ವತಿಯಿಂದ ಬುಧವಾರ ನೆರೆ ಸಂತ್ರಸ್ತರಿಗೆ ಪರಿಹಾರ ಕಿಟ್ ವಿತರಿಸಿ ಮಾತನಾಡಿದರು.
ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿ ಅತಿವೃಷ್ಟಿ ಸೃಷ್ಟಿಯಾಗಿದೆ. ಜನರ ಮನೆ,ಹೊಲ, ಭತ್ತದ ಗದ್ದೆಗಳು ನೀರಿನಲ್ಲಿ ಮುಳುಗಿ ಹೋಗಿವೆ. ಇಂತಹ ಸಮಯದಲ್ಲಿ ನಾನು ದಸರಾ-ದೀಪಾವಳಿ ಹಬ್ಬ ಆಚರಿಸುವ ಬದಲು ಜನರ ಬಳಿ ಇರುವುದೇ ದೊಡ್ಡ ಹಬ್ಬ ಎಂದರು.
ಜಿಲ್ಲೆಯಲ್ಲಿ ಇಲ್ಲಿಯವರೆಗೆ 1,108 ಮನೆಗಳು ಹಾನಿ ಗೊಳಗಾಗಿವೆ. ಅಂದಾಜು 4 ಸಾವಿರ ಹೆಕ್ಟೇರ್ ಗಳಷ್ಟು ಬೆಳೆ ಹಾನಿಗೊಳಗಾಗಿದೆ. ಸಂಪೂರ್ಣವಾಗಿ ಐದು ಮನೆಗಳು, ತೀವ್ರತರವಾಗಿ ಮೂರು ಮನೆಗಳು, ಇನ್ನುಳಿದ 1,100 ಮನೆಗಳು ಸಣ್ಣ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ ಐದು ಲಕ್ಷ , ತೀವ್ರತರದ ಹಾನಿಗೊಳಗಾದ ಮನೆಗಳಿಗೆ ಒಂದು ಲಕ್ಷ ಮತ್ತು ಭಾಗಶಃ ಹಾನಿಗೊಳಗಾದ ಮನೆಗಳಿಗೆ 50 ಸಾವಿರ ರೂಪಾಯಿ ಪರಿಹಾರ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಸದ್ಯ ನಾನು ಹರಿಹರ ನಗರಸಭೆಯ ಆಡಳಿತಾಧಿ ಕಾರಿ ಯಾಗುವುದರ ಜೊತೆಗೆ ಜಿಲ್ಲಾಧಿಕಾರಿಯೂ ಆಗಿರುವುದರಿಂದ ನಗರಸಭೆಯ ಪ್ರತಿಯೊಂದು ಆಗು-ಹೋಗುಗಳನ್ನು ಪ್ರತಿ ವಾರವೂ ತಪ್ಪದೆ ಗಮನಿಸಿ ನೋಡುತ್ತಿದ್ದೇನೆ ಮತ್ತು ಜಿಲ್ಲೆಯಲ್ಲಿಯೇ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸುಮಾರು 125 ನೆರೆ ಸಂತ್ರಸ್ತರಿಗೆ 2 ಬ್ಯಾಂಕ್ವೆಟ್, 2 ಚಾಪೆ, 2 ಸೀರೆ, ಪಂಚೆ, ಅಂಗಿ ಮತ್ತು ಇತರೆ ಸಾಮಗ್ರಿಗಳನ್ನಳಗೊಂಡ ಒಂದೊಂದು ಕಿಟ್ಟಗಳನ್ನು ಜಿಲ್ಲಾಧಿಕಾರಿ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಬಾಲಕೃಷ್ಣ, ತಹಶಿಲ್ದಾರ್ ರಾಮಚಂದ್ರಪ್ಪ, ಪೌರಾಯುಕ್ತೆ ಎಸ್.ಲಕ್ಷ್ಮಿ ,ಉಜಿನಪ್ಪ ಎ.ಆರ್, ಬಿ.ಆರ್.ಚಂದ್ರಪ್ಪ, ಪಾಲಾಕ್ಷಿ, ಕಲ್ಪನಾ ಶೇಖರಪ್ಪ ,ಪ್ರೇಮ ಸೇರಿದಂತೆ ಮತ್ತಿತರರು ಉಪಸ್ತಿತರಿದ್ದರು.



