ಡಿವಿಜಿಸುದ್ದಿ.ಕಾಂ, ಹರಿಹರ: ಜ್ವರ, ಕೆಮ್ಮು, ನೆಗಡಿಯಾದರೆ ತಕ್ಷಣ ವೈದ್ಯರ ಬಳಿ ಹೋಗಿ ಸೂಕ್ತ ಚಿಕಿತ್ಸೆ ಪಡೆಯುತ್ತೇವೆ. ಆದರೆ, ಮಾನಸಿಕ ಕಾಯಿಲೆ ಬಗ್ಗೆ ವೈದ್ಯರ ಬಳಿ ಹೋಗುವುದು ಅಪರೂಪ. ಮಾನಸಿಕ ಕಾಯಿಲೆ ದೈಹಿಕ ಕಾಯಿಲೆಗಿಂತ ಅಪಾಯಕಾರಿ, ಈ ಬಗ್ಗೆ ನಿರ್ಲಕ್ಷ್ಯ ವಹಿಸಬಾರದೆಂದು ಹಿರಿಯ ಆರೋಗ್ಯ ಸಹಾಯಕ ಎಂ.ಉಮ್ಮಣ್ಣ ಹೇಳಿದರು.
ತಾಲೂಕಿನ ಕೊಂಡಜ್ಜಿ ಆರೋಗ್ಯ ಕೇಂದ್ರದಿಂದ ಪಾಮೇನಹಳ್ಳಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಮಾನಸಿಕ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೈಹಿಕ ಆರೋಗ್ಯದಂತೆ ವ್ಯಕ್ತಿಯ ಮಾನಸಿಕ ಆರೋಗ್ಯವನ್ನೂ ಕಾಪಾಡಿಕೊಳ್ಳುವುದು ಆಧುನಿಕತೆಯಲ್ಲಿ ಸವಾಲಾಗಿ ಪರಿಣಮಿಸಿದೆ. ಚಿತ್ತ ಚಂಚಲತೆ, ಚಿತ್ತ ವಿಕಲತೆ, ಮದ್ಯವ್ಯಸನ, ಮನೋ ದೈಹಿಕ ಬೇನೆಗಳು, ವ್ಯಕ್ತಿ ದೋಷ, ಮೆದುಳಿನ ದೋಷಗಳು ಮಾನಸಿಕ ಕಾಯಿಲೆಗಳಾಗಿವೆ. ತೀವ್ರ ತುಂಟಾಟ, ಮಂಕುತನ, ಹಾಸಿಗೆ ಮಾಡಿಕೊಳ್ಳುವುದು, ಶಾಲೆಗೆ ಹೋಗಲು ನಿರಾಕರಿಸುವುದು, ವಿಪರೀತ ಭಯಪಡುವುದು, ಸುಳ್ಳು, ಕಳ್ಳತನ, ಲೈಂಗಿಕ ಅಪರಾಧಗಳು ಮಾನಸಿಕ ಕಾಯಿಲೆಗಳ ಸ್ವರೂಪಗಳಾಗಿವೆ ಎಂದರು.
ಮಾನಸಿಕ ಕಾಯಿಲೆಯನ್ನು ಗುರುತಿಸುವಲ್ಲಿ ಪೋಷಕರ ಪಾತ್ರ ಮುಖ್ಯ. ಅನುಮಾನ ಬಂದಲ್ಲಿ ಕೂಡಲೇ ಮಾನಸಿಕ ತಜ್ಞ ವೈದ್ಯರಲ್ಲಿ ಸಲಹೆ ಪಡೆದು ಚಿಕಿತ್ಸೆ ಆರಂಭಿಸಬೇಕು. ಇದನ್ನು ನಿರ್ಲಕ್ಷಿಸಿದಲ್ಲಿ ಆ ಕಾಯಿಲೆ ಬೆಳೆದು ಅವಾಂತರವಾಗುವ ಅಪಾಯವಿರುತ್ತದೆ ಎಂದರು.
ಉದ್ಘಾಟಿಸಿದ ಗ್ರಾಪಂ ಸದಸ್ಯ ಕೃಷ್ಣಪ್ಪ ಮಾತನಾಡಿ, ಮಾನಸಿಕ ಕಾಯಿಲೆ ಇರುವವರಿಗೆ ಕುಟುಂಬದವರ ಹಾಗೂ ಸಮಾಜದವರ ಸಹಾನುಭೂತಿ ಇರಬೇಕು. ಅವರಿಗೆ ವೈದ್ಯರಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಬೇಕೆಂದರು.
ವೈದ್ಯಾಧಿಕಾರಿ ಡಾ.ಡಿ.ಎನ್.ಶಶಿಕಲಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುನಂದಾದೇವಿ, ಅಂಗನವಾಡಿ ಕಾರ್ಯಕರ್ತೆ ರೇಣುಕಮ್ಮ, ಆಶಾ ಕಾರ್ಯಕರ್ತೆಯರಾದ ರೇಣುಕಾ, ಮಂಜುಳಮ್ಮ, ಗೀತಾ, ಈರಮ್ಮ, ಸರೋಜ, ರೇಖಾ, ಅಂಗನವಾಡಿ ಸಹಾಯಕಿ ಶೃತಿ, ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಅನ್ನಪೂರ್ಣ, ಸುನಿತಾ, ಕಸ್ತೂರಮ್ಮ, ಪ್ರತಿಭಾ, ಅಂಬಿಕಾ, ತೇಜಸ್ವಿನಿ ಇತರರಿದ್ದರು.



