ಡಿವಿಜಿ ಸುದ್ದಿ , ಹರಪನಹಳ್ಳಿ: ಬರದ ನಾಡು ಹರಪನಹಳ್ಳಿಯಲ್ಲಿ ಮಳೆಯ ಅಬ್ಬರ ಜನ ಜೀವನ ತತ್ತರಿಸಿ ಹೋಗಿದೆ. ತಾಲೂಕಿನಾದ್ಯಾಂತ ಸೋಮವಾರ ಸಂಜೆಯಿಂದ ಇಡೀ ರಾತ್ರಿ ಸುರಿದ ಧಾರಕಾರ ಮಳೆಗೆ ಭತ್ತ, ಈರುಳ್ಳಿ ಸೇರಿದಂತೆ ನೂರಾರು ಎಕರೆ ಬೆಳೆ ಜಲಾವೃತಗೊಂಡಿವೆ. ಸಿಡಿಲು ಬಡಿದು 1 ಆಕಳು, 2 ಕುರಿಗಳು ಬಲಿಯಾಗಿವೆ. ಹಲವು ಕೆರೆಗಳು ಕೋಡಿ ಬಿದ್ದ ಹರಿಯುತ್ತಿದ್ದು, 200 ಕ್ಕೂ ಹೆಚ್ಚು ಮನೆಗಳು ಧರೆಗುರುಳಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಯಡಿಹಳ್ಳಿ ಗ್ರಾಮದಲ್ಲಿ 2, ದ್ಯಾಪನಾಯಕನಹಳ್ಳಿ- ಬೆಣ್ಣೆಹಳ್ಳಿ ಗ್ರಾಮದ ೪ ಮನೆಗಳಿಗೆ ನೀರು ನುಗ್ಗಿ ಆಹಾರ ಧಾನ್ಯಗಳೆಲ್ಲಾ ನೀರು ಪಾಲಾಗಿವೆ. ಚಿಗಟೇರಿ ಹೋಬಳಿಯಲ್ಲಿ ಅತೀ ಹೆಚ್ಚು ಈರುಳ್ಳಿ ಬೆಳೆ ನೀರು ಪಾಲಾಗಿದೆ. ಲೋಕೇಶ್ವರ ಗ್ರಾಮದಲ್ಲಿಈಶಪ್ಪ ಎಂಬುವವರ ಈರುಳ್ಳಿ ಬೆಳೆ ಹಗರಿಹಳ್ಳದ ನೀರಿಗೆ ಕೊಚ್ಚಿ ಹೋಗಿದೆ.
ತೆಲಿಗಿ, ಚಿಗಟೇರಿ, ಹರಪನಹಳ್ಳಿ ಕಸಬಾ ಹೋಬಳಿಯಲ್ಲಿ ಈರುಳ್ಳಿ 66 ಹೆಕ್ಟರ್ ಮತ್ತು ಟಮೋಟೊ20 ಹೆಕ್ಟರ್ ಬೆಳೆ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ತಾಲ್ಲೂಕಿನಾದ್ಯಂತ ಒಟ್ಟು 248 ಕ್ಕೂ ಮನೆಗಳು ಭಾಗಶಃ ಹಾನಿಯಾಗಿವೆ.