ಡಿವಿಜಿ ಸುದ್ದಿ, ದಾವಣಗೆರೆ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದು ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಂಪನ್ಮೂಲ ವ್ಯಕ್ತಿ ಎಂ.ಎಂ. ಚಂದ್ರಪ್ಪ ಕರೆ ನೀಡಿದರು.
ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಶ್ರೀ ಜೈ ಭಾರತಾಂಬೆ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡಿದ ವ್ಯಕ್ತಿಗಳ ಬಗ್ಗೆ ಮಾರ್ಗದರ್ಶನ ನೀಡಿ, ಮಕ್ಕಳಲ್ಲಿ ಆದರ್ಶವಾದವನ್ನು ತುಂಬಾಬೇಕಿದೆ ಎಂದು ತಿಳಿಸಿದರು.
ಸಂಸ್ಥೆಯ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಮಾತನಾಡಿ, ಸಂಸ್ಥೆಯು 26 ವರ್ಷಗಳಿಂದ ಉತ್ತಮ ಶಿಕ್ಷಣ ನೀಡುತ್ತ ಬಂದಿದ್ದು ಶಿಕ್ಷಣದ ಜೊತೆಗೆ ಹಲವು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಮಕ್ಕಳು ತೊಡಗಿಕೊಂಡಿದ್ಧಾರೆ. ಈ ಮೂಲಕ ಮಕ್ಕಳಲ್ಲಿ ಸ್ಪರ್ಧಾತ್ಮಕ ಭಾವನೆ ಬೆಳೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಎಲ್.ಕೆ.ಜಿ ಯಿಂದ 05 ನೇ ತರಗತಿವರೆಗೂ ಹಲವಾರು ವಿದ್ಯಾರ್ಥಿಗಳು ಪ್ರೇಮ ಸಾರುವ ನೃತ್ಯಗಳನ್ನು ಮಾಡಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶ್ವಿನಿ ಚಂದ್ರಪ್ಪ, ಸ್ಥಳ ದಾನಿಗಳಾದ ಸಿದ್ದನಗೌಡ್ರು, ಮರುಳಸಿದ್ದನಗೌಡ್ರು, ಉಮಾದೇವಿ, ಜೈ ಭಾರತಾಂಬೆ ಶಾಲೆಯ ಅಧ್ಯಕ್ಷ ಮಹೇಶ್, ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್, ಅಂಜಿನಪ್ಪ, ಸಿದ್ದಪ್ಪ, ತಳವಾರ ಅಂಜಿನಪ್ಪ, ಮಕ್ಕಳ ಪೋಷಕರು, ಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



