ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲ್ಲೂಕಿನ ಉಚ್ಚoಗಿದುರ್ಗದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಉತ್ಸವಾoಭ ಪ್ರೌಢಶಾಲೆಯಲ್ಲಿ ಇಂದು ಎಸ್.ಎಸ್. ಎಲ್ ಸಿ. ಪರೀಕ್ಷೆ ಯಾವುದೇ ಆತಂಕವಿಲ್ಲದೆ ನಡೆಯಿತು.
ಮೊದಲ ದಿನ ಅರಸೀಕೆರೆ ಪೊಲೀಸ್ ಸಿಬ್ಬಂದಿ ಪರೀಕ್ಷೆ ಬಂದೋಬಸ್ತ್ ಬಂದಿದ್ದರು. ಅಂದು ಸಂಜೆ ಆ ಪೇದೆಗೆ ಕರೊನ ಪಾಸಿಟಿವ್ ಬಂದಿತ್ತು. ಇದರಿಂದ ಗ್ರಾಮಸ್ಥರು ಹಾಗೂ ಪೋಷಕರೂ, ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.
ಈ ಸುದ್ದಿಯನ್ನು ತಿಳಿದು ಗ್ರಾಮಕ್ಕೆ ಆಗಮಿಸಿದ ಹರಪನಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆ ಜೊತೆಗೂಡಿ ಎರಡು ಶಾಲೆಗಳಲ್ಲಿ ರಾಸಾಯನಿಕ ಸಿಂಪರಣೆ ಮಾಡಿದ್ದರು. ಮಕ್ಕಳ ಪೋಷಕರೂ, ಶಿಕ್ಷಕರಿಗೆ ಯಾವುದೇ ಕಾರಣಕ್ಕೂ ಭಯ ಬೀಳುವ ಅಗತ್ಯವಿಲ್ಲ ಎಂದು ಜಾಗೃತಿ ಮೂಡಿಸಲಾಗಿತ್ತು. ಇಂದು ನಡೆದ ಗಣಿತ ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ಬರೆದರು.
ಉಚ್ಚoಗಿದುರ್ಗ,ಚಟ್ನಿಹಳ್ಳಿ, ರಾಮಘಟ್ಟ, ತುಂಬಿಗೆರೆ, ಮಾದಿಹಳ್ಳಿ, ಅಣಜಿಗೆರೆ ಗ್ರಾಮಗಳ ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಗೆ ಹಾಜರಾಗಿದ್ದ ಮಕ್ಕಳು ಪ್ರವೇಶ ದ್ವಾರದಿಂದಲೇ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಒಳಗೆ ಬರುತ್ತಿದ್ದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ದೇಹದ ಉಷ್ಣತೆ ಪರೀಕ್ಷೆ ಮಾಡಿ ಸಾನಿಟೈಜರ್ ಹಾಕಿ ಯಾವುದೇ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸಿ ಮಕ್ಕಳು ಪರೀಕ್ಷೆಗೆ ಗೈರು ಹಾಜರಾಗದಂತೆ ಕ್ರಮ ಕೈಗೊಳ್ಳಲಾಗಿತ್ತು.
ಕೊರೊನ ಸೋಂಕಿಗೆ ಒಳಗಾಗಿರುವ ಪೇದೆಯೂ ಶಾಲೆಯ ಹೊರಗೆ ಬಂದು ಹೋಗಿದ್ದು ಯಾವುದೇ ಮಕ್ಕಳ ಹತ್ತಿರ ಹೋಗಿಲ್ಲ. ಮಕ್ಕಳಿಗೆ ಯಾವುದೇ ಸೋಂಕು ಹರಡದಂತೆ ಗ್ರಾಮದ ಎರಡು ಶಾಲೆಯಲ್ಲಿ ರಾಸಾಯನಿಕ ಸಿಂಪರಣೆ ಮಾಡಲಾಗಿತ್ತು. ಮಕ್ಕಳು ಯಾರು ಗೈರು ಹಾಜರಾಗದೆ ಪರೀಕ್ಷೆಗೆ ಬಂದಿದ್ದಾರೆ.