ಡಿವಿಜಿ ಸುದ್ದಿ,ಹರಪನಹಳ್ಳಿ: ಹೊಲದಲ್ಲಿ ಕೆಲಸ ಮುಗಿಸಿ ದಣಿದ ಎತ್ತುಗಳನ್ನು ನೀರು ಕುಡಿಸಲು ತೆರಳಿದ್ದ ವೇಳೆ ಎತ್ತಿನ ಗಾಡಿ ಗೋಕಟ್ಟೆಯಲ್ಲಿ ಮುಳುಗಿ ಎತ್ತು ಮೃತಪಟ್ಟಿರುವ ಘಟನೆ ತಾಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಗ್ರಾಮದ ಹುಚ್ಚೆಂಗೆಪ್ಪ ಎಂಬುವವರ ಮೃತಪಟ್ಟ ಎತ್ತು ಎಂದು ತಿಳಿದು ಬಂದಿದೆ. ಸುಗ್ಗಿಯ ಕಾಲವಾಗಿದ್ದರಿಂದ ಹುಚ್ಚೆಂಗೆಪ್ಪ ಹೊಲದಲ್ಲಿನ ಪೈರನ್ನು ಎತ್ತಿನಗಾಡಿಯಲ್ಲಿ ಕಣಕ್ಕೆ ಸಾಗಿಸಿದ್ದಾರೆ. ಬಿಸಿಲು ದಗೆಯಿಂದ ಬಸವಳಿದ ಎತ್ತುಗಳನ್ನು ಗಾಡಿ ಸಹಿತ ನೀರು ಕುಡಿಸಲು ಗೋಕಟ್ಟೆಗೆ ತೆರಳಿದ್ದಾರೆ. ದಣಿದ ಎತ್ತುಗಳು ರಭಸವಾಗಿ ನೀರು ಕುಡಿಯಲು ಗೋಕಟ್ಟೆಗೆ ನುಗ್ಗಿದ್ದರಿಂದ ನಿಯಂತ್ರಣ ಸಿಗದೆ ಎತ್ತುಗಳು ಸಹಿತ ನೀರಲ್ಲಿ ನುಗ್ಗಿದೆ. ಒಂದು ಎತ್ತು ನೀರಿನಿಂದ ಹೂರಗಡೆ ಬಂದಿದ್ದು, ಮತ್ತೊಂದು ಎತ್ತು ಗಡಿಯ ಅಡಿಯಲ್ಲಿ ಸಿಲುಕಿ ಮೃತಪಟ್ಟಿದೆ. ಗಾಡಿಯಲ್ಲಿದ್ದ ರೈತ ಹುಚ್ಚೆಂಗೆಪ್ಪ ಹಾಗೂ ಅವರ ಮಗ ಈಜಿಕೊಂಡು ದಡಸೇರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.



