ಡಿವಿಜಿ ಸುದ್ದಿ, ಹರಪನಹಳ್ಳಿ: ಪ್ರತಿ ವರ್ಷದ ದೀಪಾವಳಿ ಹಬ್ಬದ ಬಲಿಪಾಡ್ಯಮಿ ದಿನದಂದು ಪಟ್ಟಣದ ಬಣಗಾರಪೇಟೆಯಲ್ಲಿರುವ ಗೌಳಿ ಸಮುದಾಯದ ಕೆಲವು ಕುಟುಂಬಗಳಿಂದ ಎಮ್ಮೆ ಬೆದರಿಸುವ ಮೂಲಕ ದೀಪಾವಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಿದ್ದು, ಮಂಗಳವಾರ ವಿಶೇಷ ರೀತಿಯಲ್ಲಿ ಅಲಂಕರಿಸಿ ಎಮ್ಮೆಗಳನ್ನು ಬೆದರಿಸಲಾಯಿತು.
ಎಮ್ಮೆಗಳ ಹಾಲು ಮಾರಾಟ ಮಾಡಿ ಜೀವನ ನಡೆಸುವ ಸುಮಾರು 40 ಗೌಳಿ ಸಮುದಾಯದ ಕುಟುಂಬದವರು.ದೀಪಾವಳಿ ದಿನದಂದು ಎಮ್ಮೆ ಕಟ್ಟುವ ಹಟ್ಟಿ ಜಾಗ ಸ್ವಚ್ಚಗೊಳಿಸಿ, ಎಮ್ಮೆಗಳಿಗೆ ಸ್ನಾನ ಮಾಡಿಸುತ್ತಾರೆ. ಸಗಣಿಯಿಂದ ಹಟ್ಟಿ ಲಕ್ಕವ್ವನ್ನು ಮಾಡಿ, ಎಲ್ಲರೂ ಹೂಸ ಬಟ್ಟೆ ತೂಟ್ಟು ನಂತರ ಎಮ್ಮೆಗಳಿಗೆ ಅರಿಸಿನ ಹಚ್ಚುವ ಶಾಸ್ತ್ರ ಮಾಡಲಾಗುತ್ತದೆ. ಕೂರಳಿಗೆ ಗೆಜ್ಜೆ ಕಟ್ಟಿ, ಕೊಡುಗಳಿಗೆ ಬಣ್ಣ ಹಚ್ಚಿ, ಹೂ ಮುಡಿಸಿ ಸುಂದರವಾಗಿ ಆಲಂಕರಿಸುತ್ತಾರೆ. ಮನೆಯ
ಮುಂಭಾಗದಲ್ಲಿ ಒಣ ಸಗಣಿಯಿಂದ ಬೆಂಕಿ ಮಾಡಿ ಅದರಲ್ಲಿ ಕಬ್ಬಿಣದ ಸಲಾಕೆಯನ್ನಿಟ್ಟು
ಕಾಯಿಸಿ ಸಾಕಿದ ಎಮ್ಮೆಗಳಿಗೆ ಬರೆ(ಗುಲ್ಲು) ಹಾಕಿದರು.

ಅಲಂಕರಿಸಿದ ಎಮ್ಮೆಗಳನ್ನು ಕೇಕೆ ಹಾಕುತ್ತಾ ಯಜಮಾನ ಅವುಗಳನ್ನು ತನ್ನ ನಿಯಂತ್ರಣದಲ್ಲಿ
ಸಾಗುವಂತೆ ಅವುಗಳಿಗೆ ಆದೇಶ ನೀಡುತ್ತಾ ಮುಂದೆ ಸಾಗುತ್ತ ಎಮ್ಮೆಗಳು ಕೂಡ ಆತನನ್ನೆ
ಹಿಂಬಾಲಿಸಿದವು. ಈ ಭಾರಿ ಮಾಲೀಕ ಬೈಕ್‌ನಲ್ಲಿ ವೇಗವಾಗಿ ತೆರಳಿದರೆ ಅವನನ್ನೇ
ಎಮ್ಮೆಗಳು ಹಿಂಬಾಲಿಸುತ್ತಿದ್ದು ವಿಶೇಷವಾಗಿತ್ತು. ಪಟ್ಟಣದ ಪುರಸಭೆ ಕಛೇರಿಯಿಂದ
ತಾಯಮ್ಮನ ಹುಣಸ ಮರದ ರಸ್ತೆಯಲ್ಲಿ ಅತ್ತಿಂದಿತ್ತ-ಇತ್ತಿಂದಿತ್ತ ಓಡಿಸುತ್ತಾರೆ. ಆಗ ಪಡ್ಡೆ ಹುಡುಗರು ಎಮ್ಮೆಗಳ ಗಮನವನ್ನು ಬೇರೆಡೆಗೆ ಸೆಳೆಯಲು ಪಟಾಕಿ ಸಿಡಿಸುತ್ತಾರೆ
ಆದರೆ ಜಾಣ ಎಮ್ಮೆಗಳು ದಿಕ್ಕು ತಪ್ಪದೇ ತನ್ನ ಯಜಮಾನ ಕೇಕೆ ಹಾಕಿ ಸನ್ನೆ ಮಾಡಿದ ಕಡೆಗೆ
ಓಡುತ್ತಾ ಸಾಗುತ್ತವೆ. ಕಂಬಳಿ ಕಂಡರೆ ಅತ್ತಾ ಕಡೆ ಜಾಸ್ತಿ ಹೋಗುತ್ತಿರುವ ದೃಶ್ಯ
ನೋಡುಗರ ಗಮನ ಸೆಳೆಯಿತು.
ಸುಮಾರು ಒಂದು ತಾಸು ಸಮಯ ಎಮ್ಮೆಗಳನ್ನು ಓಡಿಸಿದ ನಂತರ ಸ್ಥಳೀಯ ಕೋಟೆ ಆಂಜನೇಯ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿರುವ ಬನ್ನಿ ಮರಕ್ಕೆ ಎಮ್ಮೆಗಳನ್ನು ಓಡಿಸಿಕೊಂಡುಹೋಗುತ್ತಾರೆ. ಅಲ್ಲಿ ಎಮ್ಮೆಗಳು ಬನ್ನಿ ಮರದ ಬಳಿ ಮಂಡಿ ಊರಿ ನಮಸ್ಕಾರ ಮಾಡಿಸಲಾಗುತ್ತಿದ್ದು, ಇದಕ್ಕೆ ಬೈಠಕ್ ಎನ್ನುತ್ತಾರೆ. ಇದಾದ ನಂತರ ಪೂಜೆ ಸಲ್ಲಿಸಿದ ಎಮ್ಮೆಗಳನ್ನು ಮೇಯಲು ಬಿಡುತಾರೆ.
ಬಲಿಪಾಡ್ಯಮಿ ದಿನದಂದು ಕೌರವರು ವಿರಾಟರಾಗುತ್ತಾರೆ. ಪಾಂಡವರ ಅಜ್ಞಾತವಾಸ ಮುಗಿದ ದಿನ. ಅಪಹರಿಸಿಕೊಂಡ ಹೋದ ದನಗಳನ್ನು ಅರ್ಜುನ ಬಿಡಿಸಿಕೊಂಡು ಬರುತ್ತಾನೆ. ಅದರ ನೆನಪಿಗೋಸ್ಕರ ಪ್ರತಿ ವರ್ಷ ಈ ಆಚರಣೆಯನ್ನು ಮಾಡುತ್ತಾ ಬಂದಿದ್ದೇವೆ. ಈ ದಿನದಂದು ಎಮ್ಮೆಗಳು ಅಂಗಡಿ-ಮಳಿಗೆಗಳಿಗೆ ಹೋಗಬಹುದು. ಅವುಗಳನ್ನು ಯಾರು ತಡೆಯುವುದಿಲ್ಲ ಎಂದು ಗೌಳಿ ಸಮುದಾಯ ಪ್ರಮುಖರಾದ ಗೌಳಿ ಈಶಣ್ಣ, ಪಶುಪತಿ ತಿಳಿಸಿದರು.



