ಡಿವಿಜಿ ಸುದ್ದಿ, ಬೆಂಗಳೂರು: ವೇತನ ಪರಿಷ್ಕರಣೆ ಭರವಸೆ ನೀಡಿ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ. ಹೀಗಾಗಿ ಇಂದಿನಿಂದ (ಸೆ.15) ಅಸಹಕಾರ ಚಳವಳಿ ಆರಂಭಿಸಿದ್ದೇವೆ. ಸೆ. 21ರಿಂದ ಹೊರರೋಗಿಗಳ ವಿಭಾಗದ (ಒಪಿಡಿ) ಕರ್ತವ್ಯಕ್ಕೆ ಗೈರು ಹಾಜರಾಗಲಿದ್ದೇವೆಂದು ಸರ್ಕಾರಿ ವೈದ್ಯಾಧಿಕಾರಿ ಸಂಘ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಾದ್ಯಂತ ಸೆ.21ರಂದು ಬೆಂಗಳೂರು ಚಲೋ ಜಾಥಾ ನಡೆಸಲಾಗುವುದು ಜೊತೆಗೆ ತುರ್ತು ಸೇವೆಗಳನ್ನು ಮಾತ್ರ ನೀಡಲಾಗುವುದು ಎಂದು ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ಜಿ.ಎ. ಶ್ರೀನಿವಾಸ್ ತಿಳಿಸಿದ್ದಾರೆ.
ಆರೋಗ್ಯಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 4,968 ವೈದ್ಯರು ಇಂದಿನಿಂದ ಆನ್‌ಲೈನ್ ಸಹಿತ ಎಲ್ಲ ಸರ್ಕಾರಿ ಸಭೆಗಳಿಂದ ದೂರ ಉಳಿಯಲಿದ್ದಾರೆ.ವೈದ್ಯಕೀಯ ಚಿಕಿತ್ಸಾ ವರದಿಯೂ ಸೇರಿ ಯಾವುದೇ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸುವುದಿಲ್ಲ. ಆದರೆ, ಕರ್ತವ್ಯಕ್ಕೆ ಹಾಜರಾಗಿ, ಎಲ್ಲ ರೀತಿಯ ವೈದ್ಯಕೀಯ ಸೇವೆಯನ್ನು ಸೆ.20 ವರೆಗೆ ಮುಂದುವರಿಸುತ್ತೇವೆ ಎಂದರು.
ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ ಮಾದರಿಯಲ್ಲಿ ವೇತನ ಪರಿಷ್ಕರಿಸಬೇಕು.ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಕೋರಿದ್ದೆವು. ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು



