ಡಿವಿಜಿ ಸುದ್ದಿ, ಉಡುಪಿ: ಮಿಲಿಟರಿ ಹೋಟೆಲ್, ಡಾಬಾಗಳಲ್ಲಿ ಮದ್ಯ ಮಾರಾಟ ಮಿತಿ ಮೀರಿದೆ. ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚರದಿಂದ ಉದ್ಯಮ ನಡೆಸುವುದು ಕಷ್ಟವಾಗಿದ್ದು, ಈ ಬಾರಿಯ ಬಜೆಟ್‍ನಲ್ಲಿ ರಾಜ್ಯ ಸರ್ಕಾರ ಮದ್ಯ ವರ್ತಕರ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಬೆಂಗಳೂರಿನಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಮದ್ಯ ವರ್ತಕ ಸಂಘ ಎಚ್ಚರಿಸಿದೆ.
ಉಡುಪಿಯಲ್ಲಿ ನಡೆದ ರಾಜ್ಯಮಟ್ಟದ ಸಮಾವೇಶದಲ್ಲಿ ತಮ್ಮ ಬೇಡಿಕೆ ಪಟ್ಟಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಿಸಲು ತೀರ್ಮಾನಿಸಿದ್ದಾರೆ. ರಾಜ್ಯದ ಬೊಕ್ಕಸಕ್ಕೆ ಅತಿ ಹೆಚ್ಚು ವರಮಾನ ನೀಡಿದರೂ ಸರ್ಕಾರ ಕನಿಷ್ಠ ಒಂದು ಗಂಟೆ ನಮ್ಮ ಸಮಸ್ಯೆಯನ್ನು ಆಲಿಸಲು ಸಮಯಾವಕಾಶವಿಲ್ಲಎಂದು ಬೇಸರ ವ್ಯ್ಕತಪಡಿಸಿದರು.
ಮಿಲಿಟರಿ ಕ್ಯಾಂಟೀನ್ ಗಳಲ್ಲಿ ನಡೆಯುತ್ತಿರುವ ಅವ್ಯವಹಾರ ಡಾಬಾ ಮತ್ತು ಗೂಡಂಗಡಿಗಳಲ್ಲಿ ಮದ್ಯ ಮಾರಾಟ ನಡೆಸುತ್ತಿರುವುದಕ್ಕೆ ಕಡಿವಾಣ ಹಾಕಬೇಕು. ಒಂದು ವೇಳೆ ಸರಕಾರ ಇದಕ್ಕೂ ಬಗ್ಗದಿದ್ದರೆ ರಾಜ್ಯಾದ್ಯಂತ ಮದ್ಯದ ಅಂಗಡಿಗಳನ್ನು ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಭ್ರಷ್ಟ ಅಬಕಾರಿ ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಲು ನಿರ್ಧರಿಸಲಾಯಿತು. ಬಜೆಟ್ ಪೂರ್ವಭಾವಿಯಾಗಿ ಸಭೆಯನ್ನು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಸಬೇಕು. ಈ ಸಭೆಯಲ್ಲಿ ನಮ್ಮ ಸಮಸ್ಯೆಯನ್ನು ಆಲಿಸಬೇಕು. ಸಮಸ್ಯೆಗೆ ಪರಿಹಾರ ಕೊಡಬೇಕು ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಮಾತನಾಡಿ, ಚಿಲ್ಲರೆ ಮದ್ಯ ಮಾರಾಟಗಾರರ ಲಾಭಾಂಶವನ್ನು ಹೆಚ್ಚಿಸಬೇಕು. ಶೇಕಡಾ 20 ಲಾಭಾಂಶವನ್ನು ಇದೀಗ ಸರ್ಕಾರ ಶೇಕಡಾ 10ಕ್ಕೆ ಕಡಿತಗೊಳಿಸಿದ್ದು ಹಿಂದಿನ ರೀತಿಯಂತೆ ಲಾಭಾಂಶವನ್ನು ನೀಡಬೇಕು. ಎಲ್ಲಾ ವರ್ಗದ ಸನ್ನದುದಾರರಿಗೆ ಏಕ ರೂಪದ ಸನ್ನದು ಶುಲ್ಕ ವಿಧಿಸಬೇಕು ಎಂದು ಆಗ್ರಹಿಸಿದರು.
ವೇದಿಕೆಯಲ್ಲಿ ಅಸೋಸಿಯೇಶನ್ ಅದ್ಯಕ್ಷ ಎಸ್. ಗುರುಸ್ವಾಮಿ, ಕೋಶಾಧಿಕಾರಿ ಮೆಹರ್ ವಾಡೆ, ಕರುಣಾಕರ್ ಹೆಗ್ಡೆ, ರಾಮಲು ಬಳ್ಳಾರಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.