ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದ ಜನರು ಪ್ರವಾಹದಿಂದ ತತ್ತರಿಸಿ ಹೋಗಿದ್ದಾರೆ. ಕೇಂದ್ರ ಸರ್ಕಾರ ತಕ್ಷಣ ರಾಜ್ಯಕ್ಕೆ 5,000 ಕೋಟಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಸಿಎಂ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಆದರೆ, ಯಾವುದೇ ಪರಿಹಾರ ಘೋಷಿಸಿಲ್ಲ. ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದ್ದು, ತಕ್ಷಣ ಕೇಂದ್ರಕ್ಕೆ ನಿಯೋಗ ಕರೆದೊಯ್ಯದು ಪರಿಹಾರ ತರಬೇಕು. ಕೇಂದ್ರದ ವಿತ್ತ ಸಚಿವರು ರಾಜ್ಯದ ಪ್ರತಿನಿಧಿಸಿದರೂ, ರಾಜ್ಯಕ್ಕೆ ಯಾವುದೇ ನೆರವು ಘೋಷಿಸುತ್ತಿಲ್ಲ. ರಾಜ್ಯದಲ್ಲಿ14 ಸಾವಿರ ಮಂದಿಗೆ ಪರಿಹಾರವೇ ಸಿಕ್ಕಿಲ್ಲ ಎಂದರು.
ರಾಜ್ಯದ 56 ತಾಲ್ಲೂಕು, 1,000ಕ್ಕೂ ಹೆಚ್ಚು ಹಳ್ಳಿಗಳಿಗೆ ನೆರೆ ಬಿಸಿ ತಟ್ಟಿದೆ. 3,000 ಮನೆ , 80,000 ಹೆಕ್ಟೇರ್ ಬೆಲೆ ನಾಶವಾಗಿದೆ. 3,500 ಕಿಲೋ ಮೀಟರ್ ರಸ್ತೆ ಹಾಳಾಗಿದೆ ಎಂದು ಮಾಹಿತಿ ನೀಡಿದರು.
ಹಿಂದಿನ ವರ್ಷ ಸೌಜನ್ಯಕ್ಕೂ ರಾಜ್ಯದ ನೆರೆ ಪ್ರದೇಶಕ್ಕೆ ಪ್ರಧಾನಿ ಮೋದಿ ಬರಲಿಲ್ಲ. ರಾಜ್ಯ ಸರ್ಕಾರ ನೆರೆ ಪರಿಹಾರ ಬಗ್ಗೆ ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.ಈ ಬಾರಿ ಪ್ರವಾಹದಿಂದ 10 ಸಾವಿರ ಕೋಟಿಯ ನಷ್ಟವಾಗಿದೆ. ರಾಜ್ಯ ಸರ್ಕಾರ ಕೇವಲ 450 ಕೋಟಿ ಮಾತ್ರ ಪರಿಹಾರಕ್ಕೆ ಮನವಿ ಮಾಡಿದ್ದಾರೆ. ಬಿಜೆಪಿಯ 25 ಸಂಸದರು ರಾಜ್ಯದಿಂದ ಗೆದ್ದಿದ್ದಾರೆ. ಪರಿಹಾರ ವಿಚಾರದಲ್ಲಿ ಇಲ್ಲಿಯವರೆಗೆ ಅವರು ಪ್ರಧಾನಿ ಮೇಲೆ ಒತ್ತಡ ತಂದಿಲ್ಲ ಎಂದರು.



