ಡಿವಿಜಿ ಸುದ್ದಿ, ದಾವಣಗೆರೆ: ದೇಶದ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಆರ್ಥಿಕ ಗಣತಿ ನಡೆಸುತ್ತಿದ್ದು, ಜನರು ಯಾವುದೇ ಆತಂಕ, ಗೊಂದಲಗಳಿಗೆ ಒಳಗಾಗದೇ ನಿಮ್ಮ ಮನೆ ಬಾಗಿಲಿಗೆ ಬಂದ ಗಣತಿದಾರರಿಗೆ ಸರಿಯಾದ ಮಾಹಿತಿ ನೀಡಿ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
7ನೇ ಆರ್ಥಿಕ ಗಣತಿ ಕಾರ್ಯದ ಪರಿಕಲ್ಪನೆಗಳ ಕುರಿತು ಮಾಹಿತಿ ನೀಡಲು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಇಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆರ್ಥಿಕ ಸ್ಥಿತಿಗಳು ಮತ್ತು ಆದಾಯವನ್ನು ತಿಳಿದುಕೊಳ್ಳುವ ಉದ್ದೇಶದಿಂದ ಜಿಲ್ಲೆಯಾದ್ಯಂತ 2019-20 ನೇ ಸಾಲಿನಲ್ಲಿ 7 ನೇ ಆರ್ಥಿಕ ಗಣತಿ (ಸರ್ವೇ) ಯನ್ನು ಪ್ರಾರಂಭಿಸಲಾಗಿದೆ. ಜನರು ಯಾವುದೇ ರೀತಿಯ ಭಯ ಮತ್ತು ಆತಂಕಗಳಿಗೆ ಒಳಗಾಗದೇ ಗಣಕೀದಾರರಿಗೆ ಸತ್ಯವಾದ ಮತ್ತು ನಿಖರವಾದ ಅಂಶಗಳನ್ನು ನೀಡಿವುದರ ಮೂಲಕ ಈ ಗಣತಿಯನ್ನು ಯಶಸ್ವಿಗೊಳಿಸಬೇಕು ಎಂದರು.
ಜನರು ಗಣತಿ ಸಂದಂರ್ಭದಲ್ಲಿ ತಮ್ಮ ಹೆಸರು, ಮನೆಯಲ್ಲಿ ವಾಸವಿರುವವರ ಹೆಸರು, ಕುಟುಂಬದ ವಾರ್ಷಿಕ ವರಮಾನ, ಪಾನ್ಕಾರ್ಡ್ ನಂಬರ್ ಹಾಗೂ ಮೊಬೈಲ್ ನಂಬರ್ಗಳನ್ನು ಗಣತಿದಾರರಿಗೆ ನೀಡಿ ಸಹಕಾರಿಸಬೇಕೆಂದರು.
-ಮಹಾಂತೇಶ ಬೀಳಗಿ-ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಗಣತಿ ಕಾರ್ಯವನ್ನು ಆರಂಭಿಸಲಾಗಿದೆ. ಜನರು ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದ ಗಣತಿ ಎಂದು ಭಾವಿಸಿಕೊಂಡು ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂಬ ಅಂಶ ತಿಳಿದು ಬಂದಿದೆ. ಜನರು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೇ ಗಣತಿದಾರರಿಗೆ ಸತ್ಯ ಮತ್ತು ಸ್ಪಷ್ಟವಾದ ಮಾಹಿತಿ ನೀಡಬೇಕು.
ಪ್ರತಿ ಮನೆಯಲ್ಲಿ ಮತ್ತು ಇತರೆ ಘಟಕಗಳಲ್ಲಿ ಉತ್ಪಾದನೆಯಾಗುವ ಸರಕುಗಳು, ಅವುಗಳ ವಿತರಣೆ,ಮಾರಾಟ ಅಥವಾ ಸೇವಾ ಚಟುವಟಿಕೆಯಿಂದ ರಾಷ್ಟ್ರೀಯ ಉತ್ಪನ್ನಕ್ಕೆ ಮೌಲ್ಯವನ್ನು ತಂದು ಕೊಡುತ್ತಿವೆಯೇ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಈ ಆರ್ಥಿಕ ಗಣತಿಯನ್ನು ನಡೆಸಲಾಗುತ್ತಿದೆ. ಈ ಗಣತಿಯಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯಗಳ ಎಲ್ಲಾ ಉದ್ಯಮಗಳ ಗಣತಿಯನ್ನು ಮಾಡಲಾಗುತ್ತದೆ. ಆರ್ಥಿಕ ಗಣತಿಯು ದೇಶದ ಪ್ರಗತಿಯಲ್ಲಿ, ರಾಷ್ಟ್ರೀಯ ತಲಾದಾಯ ಮತ್ತು ಜಿಡಿಪಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಗಣತಿಯು ಸಂಪೂರ್ಣ ಮೊಬೈಲ್ ಆ್ಯಪ್ (seventh economic census 2019) ಬಳಕೆಯೊಂದಿಗೆ ನಡೆಯುತ್ತದೆ. ಗಣಕಿದಾರಿಗೆ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ನೀಡಲಾಗಿದ್ದು ಅದನ್ನು ಬಳಸಿಕೊಂಡು ಮಾಹಿತಿಯನ್ನು ದಾಖಲಿಸಲಾಗುತ್ತದೆ. ಮತ್ತು ಗಣತಿ ಕಾರ್ಯ ಮುಗಿದ ನಂತರ ಕಡ್ಡಾಯವಾಗಿ ಮೊಬೈಲ್ನಿಂದ ಸೃಜಿಸಲ್ಪಟ್ಟ ನಂಬರ್ ಅನ್ನು ಮನೆಯ ಬಾಗಿಲಿಗೆ/ಗೋಡೆಗೆ ಬರೆಯಲಾಗುತ್ತದೆ ಎಂದು ತಿಳಿಸಿದರು.
ಈ ಗಣತಿಯು ಸುಗಮವಾಗಿ ಹಾಗೂ ಸುಸೂತ್ರವಾಗಿ ನಡೆಸುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿ ರಚಿಸಲಾಗಿದ್ದು, ಇದರಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸದಸ್ಯರನ್ನಾಗಿ, ಮತ್ತು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳನ್ನು ಸದಸ್ಯ ಕಾರ್ಯದರ್ಶಿಗಳಾಗಿ ನಿಯೋಜಿಸಲಾಗಿದ್ದು, ಈ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯ ಗಣತಿ ಕಾರ್ಯ ಸುಸೂತ್ರವಾಗಿ ನಡೆಯುತ್ತಿರುವುದನ್ನು ದೃಢಪಡಿಸಿಕೊಂಡು ಕಾರ್ಯ ನಿರ್ವಹಿಸಬೇಕು ಎಂದರು.
ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿಗಳು ತಮ್ಮ ತಮ್ಮ ತಾಲ್ಲೂಕುಗಳಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಿಡಿಓ ಮತ್ತು ಗ್ರಾಮ ಲೆಕ್ಕಿಗ ಅಧಿಕಾರಿಗಳು ಗಣತಿಯ ಕುರಿತು ವ್ಯಾಪಕ ಪ್ರಚಾರ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಗಣತಿ ಸಮಯದಲ್ಲಿ ಗಣತಿದಾರರು/ ಮೇಲ್ವಿಚಾರಕರಿಗೆ ಆಕಸ್ಮಿಕ ತೊಂದರೆ ಉಂಟಾದರೆ ತಾಲ್ಲೂಕು ಆರಕ್ಷಕ ಇಲಾಖೆಯವರು ರಕ್ಷಣೆ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಿರ್ದೇಶನ ನೀಡಬೇಕು ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ.ಜಿ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಜಿ.ಬಿ ಹರಮಗಟ್ಟಿ ಉಪಸ್ಥಿತರಿದ್ದರು.