ಡಿವಿಜಿ ಸುದ್ದಿ, ಕಲಬುರಗಿ: ವೈದ್ಯರ ಕೆಲ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದ್ದು, ಶೀಘ್ರವೇ ವೈದ್ಯರಿಗೆ ಸಿಹಿ ಸುದ್ದಿ ನೀಡುವುದಾಗಿ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯರು ಮುಷ್ಕರಕ್ಕೆ ಮುಂದಾಗಲ್ಲ ಎನ್ನುವ ಭರವಸೆಯಿದೆ. ಸಿಎಂ ಪುತ್ರ ವಿಜಯೇಂದ್ರ ಆರೋಗ್ಯ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ವೈದ್ಯರು ವಿಜಯೇಂದ್ರ ಬಳಿ ಹೋಗಿ ಚರ್ಚೆ ಮಾಡಿದ್ದಾರೆ. ಆ ವಿಷಯಗಳನ್ನು ಸಿಎಂ ಜೊತೆ ಚರ್ಚಿಸಿ ಇತ್ಯರ್ಥ ಮಾಡಬಹುದು. ಬೇರೆ ಯಾವ ಇಲಾಖೆಯಲ್ಲಿಯೂ ವಿಜಯೇಂದ್ರ ಹಸ್ತಕ್ಷೇಪ ಮಾಡ್ತಿಲ್ಲ ಎಂದರು.
ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಕಷ್ಟ. ಅತಿವೃಷ್ಟಿ ಮತ್ತು ವಿವಿಧ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಿಎಂ ದೆಹಲಿಗೆ ಹೋಗಿದ್ದಾರೆ. ಸಂಪುಟ ವಿಸ್ತರಣೆ ಕುರಿತು ದೆಹಲಿಗೆ ಹೋಗ್ತಿಲ್ಲ ಎಂದು ತಿಳಿಸಿದರು.
ಕೊರೊನಾ ಚಿಕಿತ್ಸೆಗೆ ಅಧಿಕ ಹಣ ವಸೂಲಿ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುತ್ತೇವೆ. ಖಾಸಗಿ ಆಸ್ಪತ್ರೆ ಮಾನ್ಯತೆ ರದ್ದುಗೊಳಿಸ್ತೇವೆ ಎಂದು ಎಚ್ಚರಿಕೆ ನೀಡಿದರು.
ಡ್ರಗ್ಸ್ ಜಾಲದಲ್ಲಿ ಸಿನಿಮಾ ನಟರು, ರಾಜಕಾರಣಿಗಳು ಭಾಗಿಯಾಗಿದಾರೆ ಅನ್ನೋ ಆರೋಪವಿದೆ. ಡ್ರಗ್ಸ್ ಗೆ ಯುವ ಸಮುದಾಯ ಬಲಿಯಾಗ್ತಿದೆ. ರಾಜ್ಯ ಸರ್ಕಾರ ಗಂಭೀರವಾಗಿ ತನಿಖೆ ನಡೆಸ್ತಿದೆ. ಯಾರೇ ತಪ್ಪಿಸ್ಥರಿದ್ದರೂ ಕ್ರಮ ಖಚಿತ. ಸಿನೆಮಾ ನಟರಿರಲ್ಲಿ, ರಾಜಕಾರಣಿಗಳಿರಲ್ಲಿ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.



