ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸಿದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಹರಿಹರ ತಾಲೂಕಿನ ಬೆಳ್ಳೂಡಿ ಕನಕ ಗುರುಪೀಠದ ಶಾಖಾಮಠದಲ್ಲಿ ಮಾತನಾಡಿದ ಶ್ರೀಗಳು, ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸಬೇಕು ಎಂದು ಒತ್ತಾಯಿಸಿರುವ ಜಿಲ್ಲೆಯ ಬಿಜೆಪಿ ಶಾಸಕರುಗಳಿಗೆ ಕಾಗಿನೆಲೆ ಎಚ್ಚರಿಕೆ ಮಾತುಗಳನ್ನಾಡಿದ್ದಾರೆ.

ದಾವಣಗೆರೆ ಜಿಲ್ಲೆಯ ಶಾಸಕರು ಸಚಿವರಾಗಲಿ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ, ಬದಲಾಯಿಸಲು ಮುಂದಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಸಚಿವ ಬೈರತಿ ಬಸವರಾಜ್ ಬಗ್ಗೆ ಗಂಭೀರ ಆರೋಪ ಮಾಡಿ ಉಸ್ತುವಾರಿಯಿಂದ ಕೆಳಗಿಳಿಸಲು ಯತ್ನಿಸಿದರೆ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ.
ಬೇರೆ ಜಿಲ್ಲೆಯ ಉಸ್ತುವಾರಿ ಸಚಿವರು ಯಾವಗಲೂ ಒಮ್ಮೆ ಬರುತ್ತಾರೆ. ಸ್ಥಳೀಯ ಶಾಸಕರಿಗೆ ಸಚಿವ ಸ್ಥಾನ ನೀಡಿ, ಸ್ಥಳೀಯರಿಗೆ ಉಸ್ತುವಾರಿ ನೀಡಿದರೆ ಉತ್ತಮ ಎಂದು ಜಿಲ್ಲಾ ಬಿಜೆಪಿ ಶಾಸಕರು ಇತ್ತೀಚೆಗೆ ಸಭೆ ನಡೆಸಿದ ವಿಚಾರ ಬಹಿರಂಗವಾದ ಹಿನ್ನೆಲೆ ಕಾಗಿನೆಲೆ ಶ್ರೀಗಳು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.



