ಡಿವಿಜಿ ಸುದ್ದಿ, ಸಿರಿಗೆರೆ: ತರಳಬಾಳು ಬೃಹ್ಮಠದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಗಳವರ ಐಕ್ಯ ಮಂಟಪದಲ್ಲಿ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಮಕ್ಕಳ ಜೊತೆ ದೀಪಾವಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಉತ್ತರ ಕರ್ನಾಟಕದ ಬೆಳಗಾವಿ, ಗದಗ, ಹಾವೇರಿ ಜಿಲ್ಲೆಯ ಹಲವೆಡೆ ನೆರೆ ಪರಿಹಾರ ವಿತರಣೆ ಸಮಯದಲ್ಲಿ ತರಳಬಾಳು ಶ್ರೀಗಳು ನೆರೆ ಸಂತ್ರಸ್ತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಆಶಯದಿಂದ ಸಾವಿರ ಮಕ್ಕಳಿಗೆ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಿಂದ ಉಚಿತ ಶಿಕ್ಷಣ ನೀಡುವುದಾಗಿ ತಿಳಿಸಿದ್ದರು. ಅಂತೆಯೇ ಕೆಲ ದಿನಗಳ ಹಿಂದೆಯಷ್ಟೇ ಉತ್ತರ ಕರ್ನಾಟಕದ ಬೆಳಗಾವಿ, ಗೋಕಾಕ, ಕಿತ್ತೂರು, ಗದಗ, ಭೀರನಗಡ್ಡೆ,ದವಳೇಶ್ವರ,ನಾಗನೂರ ಸೇರಿದಂತೆ ಇನ್ನಿತರ ಭಾಗಗಳಿಂದ ಇನ್ನೂರಕ್ಕೂ ಹೆಚ್ಚು ಮಕ್ಕಳು ಶಿಕ್ಷಣಕ್ಕೆ ಸಿರಿಗೆರೆಗೆ ದಾಖಲಾತಿಯಾಗಿದ್ದರು.
ಆ ಮಕ್ಕಳ ಜೊತೆ ಹಬ್ಬ ಆಚರಿಸಿ ಮುಗ್ಧ ಮಕ್ಕಳಿಗೆ ಸಂತೋಷದಿಂದ ಹಬ್ಬ ಆಚರಿಸಿದರು. ಪ್ರತಿ ವರ್ಷವೂ ಶ್ರೀಗಳು ಬೃಹನ್ಮಠದಲ್ಲಿ ದೀಪವನ್ನು ಹಚ್ಚಿದ ತದನಂತರ ಗ್ರಾಮದ ಮಕ್ಕಳು, ಮಹಿಳೆಯರು, ಪುರುಷರು ಶ್ರೀಗಳ ಬಳಿ ಬೆಳಗುವ ದೀಪವನ್ನು ಪಡೆದು ಆ ದೀಪವನ್ನು ಹಾರದಂತೆ ತಮ್ಮ ನಿವಾಸಗಳಿಗೆ ತೆಗೆದುಕೊಂಡು ಹೋಗಿ ಅದೇ ದೀಪದಿಂದ ತಮ್ಮ ಮನೆಯ ಎಲ್ಲಾ ದೀಪಗಳನ್ನು ಹಚ್ಚುವ ಸಂಪ್ರದಾಯಕ್ಕೆ ಮತ್ತಷ್ಟು ಮೆರುಗು ತರುವ ನಿಟ್ಟಿನಲ್ಲಿ ಗ್ರಾಮಸ್ಥರು ಸಹ ಉತ್ತರ ಕರ್ನಾಟಕದ ಮಕ್ಕಳ ಜೊತೆ ದೀಪ ಬೆಳಗಿಸಿ ಸಂಭ್ರಮಿಸಿದರು.
ಉತ್ತರ ಕರ್ನಾಟಕದ ಆ ಖಡಕ್ ಭಾಷೆಯಲ್ಲಿ ಮಕ್ಕಳ ಸಂಭ್ರಮ, ಸಂತೋಷ ಮಠದೆಲ್ಲೆಡೆ ಮೇಳೈಸಿತ್ತು. ಶ್ರೀಗಳ ಆಶೀರ್ವಾದ ಪಡೆಯಲು ಬಂದ ಶಿಷ್ಯರ ಬಳಿ ಮಾತಾಡುತ್ತಿದ್ದ ಮಕ್ಕಳು ಗುರೂಜಿಯವರು ಹಬ್ಬಕ್ಕೆ ಲಕ್ಷ ಲಕ್ಷ ಖರ್ಚುಮಾಡಿ ನಮಗೆ ಇಷ್ಟವಾದ ಹೊಸ ಬಟ್ಟೆಯನ್ನು ವಿತರಿಸಿರುವುದು ಮಕ್ಕಳ ಸಂಭ್ರಮ ಇಮ್ಮಡಿಗೊಳಿಸಿತ್ತು. ಜಾತಿ,ಮತ,ಪ್ರಾಂತ್ಯ, ಪ್ರದೇಶ, ಭೇದವ ಮೀರಿ ಎಲ್ಲರೂ ನಮ್ಮವರು, ಅವರ ಕಷ್ಟಕ್ಕೆ ಮರುಗುವ ಮಾನವೀಯತೆಯೇ ನಿಜವಾದ ಧರ್ಮ ಎಂದು ಸಾರುವಂತಿತ್ತು.




