ಡಿವಿಜಿ ಸುದ್ದಿ, ಬೆಂಗಳೂರು: ಕರ್ನಾಕಟಕ ಲೋಕಾಯುಕ್ತ ಸಂಸ್ಥೆಯನ್ನು ಜನಪರ ಸಂಸ್ಥೆಯಾಗಿ ಜನರಲ್ಲಿ ವಿಶ್ವಾಸ ಮೂಡುವಂತೆ ಕೆಲಸ ನಿರ್ವಹಿದಸಿದ್ದ, ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ವೆಂಕಟಾಚಲ (90) ಬುಧವಾರ ಬೆಳಿಗ್ಗೆ 6 ಗಂಟೆಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಪತ್ನಿ, ಮೂವರು ಪುತ್ರರು ಮತ್ತು ಒಬ್ಬ ಪುತ್ರಿಯನ್ನು ಹೊಂದಿದ್ದರು.
ಅವರಿಗೆ ಬೆಳಿಗ್ಗೆ 5.45ಕ್ಕೆ ಎದೆನೋವು ಕಾಣಿಸಿಕೊಂಡಿತು. ಕೂಡಲೇ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು. ಪುತ್ರ ಮತ್ತು ಪುತ್ರಿ ಅಮೆರಿಕದಲ್ಲಿದ್ದು ಅವರು ಬಂದ ನಂತರ ಗುರುವಾರ (ಅ.31) ಅಂತ್ಯಕ್ರಿಯೆ ನಡೆಯಲಿದೆ.
ನ್ಯಾಯಮೂರ್ತಿ ವೆಂಕಟಾಚಲ ಅವರು ಲೋಕಾಯುಕ್ತರಾದ ಮೇಲೆ ಸರ್ಕಾರಿ ಕಚೇರಿಯಲ್ಲಿನ ಭ್ರಷ್ಟ ಅಧಿಕಾರಿಗಳಲ್ಲಿ ಭಯ ಉಂಟಾಗಿತ್ತು. ಇದಲ್ಲದೆ, ಲೋಕಾಯುಕ್ತ ಸಂಸ್ಥೆಯಿಂದ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ಜನರಲ್ಲಿ ಮೂಡುವಂತಾಗಿತ್ತು.
ನಂಜೇಗೌಡ ವೆಂಕಟಾಚಲ ಅವರು ಜುಲೈ 3, 1930ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ಮಿಟ್ಟೂರಿನ ಕೃಷಿ ಕುಟುಂಬದಲ್ಲಿ ಜನಿಸಿದರು. ಮುಳಬಾಗಿಲಿನಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣ ಪೂರೈಸಿದರು. ಕೋಲಾರದಲ್ಲಿ ಪ್ರೌಢಶಾಲೆ ಮತ್ತು ಬೆಂಗಳೂರಿನಲ್ಲಿ ಕಾಲೇಜು ಶಿಕ್ಷಣ ಪಡೆದ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಬಿಎಸ್ಸಿ ಮತ್ತು ಕಾನೂನು ಪದವಿ ಪಡೆದರು. ಮೈಸೂರು ಕೋರ್ಟ್ ನಲ್ಲಿ 1965 ರಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದರು. ಸಿವಿಲ್, ಕ್ರಿಮಿನಲ್ ಮತ್ತು ಸಾಂವಿಧಾನಿಕ ಪ್ರಕರಣಗಳಲ್ಲಿ ಹೆಚ್ಚಿನ ಪರಿಣತಿ ಪಡೆದುಕೊಂಡರು. 1963ರಿಂದ 1973ರವರೆಗೆ ಹೆಬ್ಬಾಳ ಕೃಷಿ ವಿಶ್ವವಿದ್ಯಾಲಯದ ಕಾನೂನು ಸಲಹೆಗಾರರಾಗಿದ್ದರು. 1973 ರಿಂದ 1977 ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಸಲಹೆಗಾರಗಿದ್ದರು.



