ಡಿವಿಜಿ ಸುದ್ದಿ, ಕಲಬುರ್ಗಿ: ದೇಶದಲ್ಲಿಯೇ ಅತಿ ಹೆಚ್ಚು ಕೊರೊನಾ ಪ್ರಕರಣ ಪತ್ತೆಯಾಗಿರುವ ಮಹಾರಾಷ್ಟ್ರ ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳಿಗೂ ಬಸ್ ಸಂಚಾರ ಆರಂಭಿಸಲು ಚಿಂತನೆ ನಡೆದಿದೆ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತರ್ ರಾಜ್ಯ ಬಸ್ ಸಂಚಾರಕ್ಕೆ ಈಗಾಗಲೇ ಎಲ್ಲ ರಾಜ್ಯಗಳಿಗೂ ಪತ್ರ ಬರೆಯಲಾಗಿದ್ದು, ಅಲ್ಲಿಂದ ಒಪ್ಪಿಗೆ ಬಂದರೆ ಸಂಚಾರ ಆರಂಭಿಸಲಾಗುವುದು. ಇನ್ನು ರಾಜ್ಯದಲ್ಲಿ ಹವಾನಿಯಂತ್ರಿತ ಸ್ಲೀಪರ್ ಕೋಚ್ ಬಸ್‌ಗಳ ಟಿಕೆಟ್ ಬುಕಿಂಗ್ ಆರಂಭಿಸಲಾಗಿದ್ದು, ಹೊರ ರಾಜ್ಯ ಪ್ರವಾಸ ಮಾಡುವವರಿಂದ ಕೂಡ ಬೇಡಿಕೆ ಬರುತ್ತಿದೆ ಎಂದರು.
ಸಾರಿಗೆ ಇಲಾಖೆಗೆ 2,200 ಕೋಟಿ ನಷ್ಟ
ಕೊರೊನಾ ಲಾಕ್‌ಡೌನ್ ಹಿನ್ನೆಲೆ ರಾಜ್ಯದ ಸಾರಿಗೆ ಇಲಾಖೆಗೆ 2,200 ಕೋಟಿ ನಷ್ಟ ಸಂಭವಿಸಿದೆ. ಇದನ್ನು ಸರಿದೂಗಿಸಲು ಬಸ್ ಪ್ರಯಾಣ ದರ ಹೆಚ್ಚಳ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ಸಿಬ್ಬಂದಿ ಕಡಿತ, ರಜೆ ಮೇಲೆ ಕಳುಹಿಸುವ ಕ್ರಮವನ್ನೂ ಅನುಸರಿಸುವುದಿಲ್ಲ. ಆದರೆ ಅವವಶ್ಯಕ ಖರ್ಚು ಕಡಿವಾಣ ಹಾಕಿ, ಕಾರ್ಯಕ್ಷಮತೆ ವೃದ್ಧಿಸುವತ್ತ ಗಮನಹರಿಸುತ್ತೇವೆ. ಸದ್ಯಕ್ಕೆ 14 ಲಕ್ಷ ಪ್ರಯಾಣಿಕರು ಸರ್ಕಾರಿ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಕನಿಷ್ಠ 1 ಕೋಟಿ ಮಂದಿ ಪ್ರಯಾಣಿಸುವ ಸಾಮರ್ಥ್ಯ ಎಂದು ತಿಳಿಸಿದರು.
ಮೂರು ತಿಂಗಳಲ್ಲಿ 4 ಸಾವಿರ ಹೊಸ ಬಸ್‌ಗಳನ್ನು ಖರೀದಿಸುವ ಯೋಜನೆ ಇದೆ. ಸಿಬ್ಬಂದಿಗೆ ಎರಡು ತಿಂಗಳ ಸಂಬಳ ನೀಡಲಾಗಿದ್ದು, ಮೇ ತಿಂಗಳ ಸಂಬಳವನ್ನೂ ಸರ್ಕಾರವೇ ಭರಿಸುತ್ತದೆ ಎಂದರು.