ಡಿವಿಜಿ ಸುದ್ದಿ, ದಾವಣಗೆರೆ: ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಜಿಲ್ಲಾ ಬಿಜೆಪಿ ಘಟಕದ ನೂತನ ಅಧ್ಯಕ್ಷರಾಗಿ ವೀರೇಶ್ ಹನಗವಾಡಿ ಆಯ್ಕೆಯಾಗಿದ್ದಾರೆ. ಈ ಮೂಲಕ ದಾವಣಗೆರೆ ಜಿಲ್ಲಾ ಬಿಜೆಪಿ ನೂತನ ಸಾರಥಿಯಾಗಿ ವೀರೇಶ್ ಹನಗವಾಡಿ ಕಾರ್ಯ ನಿರ್ವಹಿಸಲಿದ್ದಾರೆ.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದು ತುಂಬಾ ಖುಷಿ ಕೊಟ್ಟಿದೆ. ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಕೆಲಸ ಮಾಡುತ್ತೇನೆ ಎಂದು ನೂತನ ಅಧ್ಯಕ್ಷ ವೀರೇಶ್ ಹನಗವಾಡಿ ಅವರು ಡಿವಿಜಿ ಸುದ್ದಿ.ಕಾಂಗೆ ಪ್ರತಿಕ್ರಿಯಿಸಿದ್ದಾರೆ. ಅವರೊಂದಿಗೆ ನಡೆಸಿರುವ ಸಂದರ್ಶನದ ಸಂಪೂರ್ಣ ವಿವರ ಇಲ್ಲಿದೆ.

ದಾವಣಗೆರೆ ಜಿಲ್ಲಾ ಬಿಜೆಪಿ ನೂತನ ಸಾರಥಿಯಾಗಿ ಆಯ್ಕೆಯಾಗಿದ್ದೀರಿ ನಿಮ್ಮ ಮೊದಲ ಪ್ರತಿಕ್ರಿಯೆ ..?
ನಮ್ಮ ಸಂಸದರಾದ ಜಿ. ಎಂ. ಸಿದ್ದೇಶ್ವರ್, ಶಾಸಕರಾದ ರವೀಂದ್ರನಾಥ್ ಸೇರಿದಂತೆ ಎಲ್ಲಾ ಶಾಸಕರು, ಹಿರಿಯ ಮುಖಂಡರು, ಕಾರ್ಯಕರ್ತರು ನನ್ನ ಮೇಲೆ ಭರವಸೆ ಇಟ್ಟು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಅವರಿಗೆ ಮೊದಲನೆಯದಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ದಾವಣಗೆರೆಯಲ್ಲಿ ಬಿಜೆಪಿ ಈಗಾಗಲೇ ಬಲಿಷ್ಠವಾಗಿದೆ. ಇನ್ನಷ್ಟು ಬಲಿಷ್ಟವಾಗುವಂತೆ ಕಾರ್ಯನಿರ್ವಹಿಸುತ್ತೇನೆ. ಮುಂದಿನ ದಿನಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಕೆಲಸ ಮಾಡುತ್ತೇನೆ.
ಪಕ್ಷ ಸಂಘಟನೆಗೆ ನಿಮ್ಮ ಪ್ಲ್ಯಾನಿಂಗ್ ಏನು ಹಾಕಿಕೊಂಡಿದ್ದೀರಿ..?
ಪಕ್ಷ ಸಂಘಟನೆಯ ನಮ್ಮ ಪ್ರತಿಯೊಂದು ಯೋಜನೆಗಳು ರಾಷ್ಟ್ರಮಟ್ಟದಲ್ಲಿ ನಿರ್ಧಾರವಾಗುತ್ತದೆ. ಅವರು ನೀಡಿದ ಕಾರ್ಯ ಸೂಚಿಯನ್ನು ಸರಿಯಾದ ಸಮಯಕ್ಕೆ ಸರಿಯಾಗಿ ಮುಗಿಸಬೇಕು. ಪಕ್ಷದ ಸೂಚನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕಾಗುತ್ತದೆ. ಹೀಗಾಗಿ ನಮ್ಮ ಪ್ರತಿಯೊಂದು ಯೋಜನೆಗಳು ನಿರ್ಧಾರವಾಗುವುದು ರಾಷ್ಟ್ರಮಟ್ಟದಲ್ಲಿ.
ದಾವಣಗೆರೆಯ 8 ವಿಧಾಸಭಾ ಕ್ಷೇತ್ರದಲ್ಲಿ 6 ರಲ್ಲಿ ಬಿಜೆಪಿ ಗೆದ್ದಿದೆ. ಒಂದು ಸಚಿವ ಸ್ಥಾನ ಇಲ್ಲ. ಈ ಬಗ್ಗೆ ಒತ್ತಡ ಹಾಕುವ ಪ್ರಯತ್ನ ಮಾಡ್ತೀರಾ..?
ದಾವಣಗೆರೆಗೆ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು ಎಂಬುದು ಎಲ್ಲಾ ಶಾಸಕರ ಒತ್ತಾಯ. ಈ ಬಗ್ಗೆ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಿದ್ದೇವೆ. ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಗೆ ಸಚಿವ ಸ್ಥಾನ ಸಿಗುವ ಭರವಸೆಯಿದೆ.
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಬಿಜೆಪಿ ಅಧಿಕಾರ ಹಿಡಿಯುತ್ತಾ..?
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ವಿಶ್ವಾಸವಿದೆ. ಬಿಜೆಪಿ ಸರಳ ಬಹುಮತದೊಂದಿಗೆ ಮಹಾನಗರ ಪಾಲಿಕೆ ಅಧಿಕಾರ ಹಿಡಿಯಲಿದೆ. ಈ ಬಗ್ಗೆ ಎಲ್ಲಾ ರೀತಿಯಲ್ಲಿ ಕಾರ್ಯ ತಂತ್ರ ರೂಪಿಸಲಾಗಿದ್ದು, ಅತಿ ಶೀಘ್ರದಲ್ಲಿಯೇ ಬಿಜೆಪಿ ಅಧಿಕಾರ ಹಿಡಿಯಲಿದೆ .
ಗ್ರಾಮೀಣ ಭಾಗದಲ್ಲಿ ಬಿಜೆಪಿ ಸಂಘನೆಗೆ ಏನು ಯೋಜನೆಗಳಿವೆ..?
ಪಕ್ಷ ಸಂಘಟನೆಯಲ್ಲಿ ನಗರ, ಗ್ರಾಮೀಣ ಪ್ರದೇಶಕ್ಕೆ ಪ್ರತ್ಯೇಕತೆ ನಮ್ಮಲ್ಲಿ ಇಲ್ಲ.ಎಲ್ಲಾ ಕಡೆಯಲ್ಲಿಯೂ ಒಂದೇ ರೀತಿಯ ಸಂಘಟನೆ ನಡೆಯಲಿದೆ. ಪಕ್ಷದ ಕಾರ್ಯ ಸೂಚಿಯನ್ನು ಮನೆ ಮನೆಗೆ ತಲುಪಿಸುವುದು ನಮ್ಮ ಕರ್ತವ್ಯ.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಅಸಮಾಧಾನ ಹೊರ ಹಾಕಿದ್ದವರನ್ನು ಯಾವ ರೀತಿ ಸಂಘಟನೆ ಮಾಡ್ತೀರಿ..?
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದವರು ಯಾರು ಪಕ್ಷ ತೊರೆದಿಲ್ಲ. ಪಕ್ಷದಲ್ಲಿಯೇ ಇದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಪಕ್ಷವನ್ನು ಇನ್ನಷ್ಟು ಬಲಿಷ್ಟಗೊಳಿಸುತ್ತೇನೆ.