ಡಿವಿಜಿ ಸುದ್ದಿ, ದಾವಣಗೆರೆ: ನಗರದ ಲಕ್ಷ್ಮೀ ಕೋ-ಆಪರೇಟಿವ್ ಸೊಸೈಟಿಯು ಠೇವಣಿದಾರರ 18 ಕೋಟಿ ಹಣ ವಾಪಸ್ಸು ನೀಡುವಂತೆ ಆಗ್ರಹಿಸಿ ಠೇವಣಿದಾದರು ನಾಳೆ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಠೇವಣಿದಾರರ ಒಕ್ಕೂಟದ ಕಾರ್ಯದರ್ಶಿ ವೇದಮೂರ್ತಿ, ಲಕ್ಷ್ಮೀ ಕೋ –ಆಪರೇಟಿವ್ ಬ್ಯಾಂಕ್ ನಲ್ಲಿ ಸುಮಾರು 1,200 ಕ್ಕೂ ಹೆಚ್ಚು ಜನರು 18 ರಿಂದ 20 ಕೋಟಿಯಷ್ಟು ವಿವಿಧ ಬಗೆಯ ಠೇವಣಿ ಇಟ್ಟಿದ್ದಾರೆ. ಬ್ಯಾಂಕ್ ನಷ್ಟದಲ್ಲಿದೆ ಎಂಬ ಕಾರಣ ನೀಡಿ ಠೇವಣಿದಾರರ ಹಣ ವಾಪಸ್ಸು ಕೊಡಲು ಲಕ್ಷ್ಮೀ ಕೋ-ಆಪರೇಟಿವ್ ಸೊಸೈಟಿ ಸತಾಯಿಸುತ್ತಿದೆ. ಸಣ್ಣ ಸಣ್ಣ ವ್ಯಾಪಾರಿಗಳು, ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಅನೇಕರು ಬ್ಯಾಂಕ್ ವ್ಯವಹಾರ ನೋಡಿ ಠೇವಣಿ ಮಾಡಿದ್ದರು. ಆದರೆ, ಈಗ ಬ್ಯಾಂಕ್ ನಷ್ಟದಲ್ಲಿದೆ ಎಂದು ಠೇವಣಿ ವಾಪಸ್ಸು ನೀಡಲು ಮುಂದಾಗುತ್ತಿಲ್ಲ. ಸೊಸೈಟಿಯ ಈ ನಿರ್ಧಾರದ ವಿರುದ್ಧ ಠೇವಣಿದಾರರೆಲ್ಲ ಸೇರಿ ನಾಳೆ ನಗರದ ಕುವೆಂಪು ರಸ್ತೆಯಲ್ಲಿರುವ ಬ್ಯಾಂಕ್ ಮುಂಭಾಗ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ ಎಂದರು.
2017 ರಿಂದ ನಮ್ಮ ಹಣ ನಮಗೆ ವಾಪಸ್ಸು ನೀಡಿ ಎಂದು ಕೇಳಿಕೊಂಡರೂ ಠೇವಣಿ ಮಾಡಿದ ಹಣ ವಾಪಸ್ಸು ನೀಡುತ್ತಿಲ್ಲ. ಪ್ರತಿ ಸಲ ಮನವಿ ಮಾಡಿದಾಗಲೂ ಸುಳ್ಳು ಭರವಸೆ ನೀಡುವ ಮೂಲಕ ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ. ಈ ಬಗ್ಗೆ ಅನೇಕರು ಕೋರ್ಟ್ ಮೆಟ್ಟಿಲೇರಿದ್ದಾರೆ. ಎಲ್ಲಾರ ಬಳಿ ಬಾಂಡ್ ಪೇಪರ್ ಇದ್ದರೂ, ನಮ್ಮ ಠೇವಣಿ ನಮಗೆ ನೀಡಲು ಸತಾಯಿಸುತ್ತಿದ್ದಾರೆ. ಈ ಬಗ್ಗೆ ಡಿಸಿ ಸೇರಿದಂತೆ ಎಲ್ಲ ಕಡೆ ದೂರು ನೀಡಿದ್ದರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬೂಸನೂರು ಶಿವಯ್ಯ, ಎನ್.ಜಿ. ಕೃಷ್ಣಮೂರ್ತಿ, ಆರ್.ಬಿ. ಹಿರೇಮಠ್ ಉಪಸ್ಥಿತರಿದ್ದರು.



