ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ತಾಲ್ಲೂಕಿನ ನಾಗರಕಟ್ಟೆಯ ಯುವಕನ ಶೂಟೌಟ್ ಪ್ರಕರಣದ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಾಗರಕಟ್ಟೆ ನಿವಾಸಿ ಚಂದ್ರಾನಾಯ್ಕ್ (25) ಮೇಲೆ ಜು. 10 ರಂದು ಸಂಜೆ 7.30 ವೇಳೆಗೆ ಸೂಳೆಕೆರೆ ಸಮೀಪ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಬಂಧಿಸಿದಂತೆ ಜಿಲ್ಲಾ ಪೊಲೀಸರು ಒಬ್ಬ ಆರೋಪಿ ಚೇತನ್ ನಾಯ್ಕ್ (27)ಅನ್ನು ಪಿಸ್ತೂಲ್ , 5 ಸಜೀವ ಗುಂಡು ಸಹಿತ ಬಂಧಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಆರೋಪಿ ಚೇತನ್ ನಾಯ್ಕ್ ಮತ್ತು ಇತರರು ಸೇರಿಕೊಂಡು ಧಾರವಾಡದ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದರು. ಈ ಕಳ್ಳತನ ಮೃತ ಚಂದ್ರನಾಯ್ಕ್ ಗೆ ಗೊತ್ತಾಗಿತ್ತು.ಕಳ್ಳತನ ಮಾಲಿನಲ್ಲಿ ತನಗೂ ಪಾಲುಬೇಕು ಎಂದು ಬೇಡಿಕೆ ಇಟ್ಟಿದ್ದ, ತನಗೆ ಪಾಲು ಕೊಡದಿದ್ದರೆ ಕಳ್ಳತನ ವಿಷಯವನ್ನು ಊರಿನಲ್ಲಿ ಮತ್ತು ಪೊಲೀಸರಿಗೆ ತಿಳಿಸುವುದಾಗಿ ಹೇಳುತ್ತಿದ್ದನು. ಇವನನ್ನು ಹಾಗೆ ಬಿಟ್ಟರೆ ಕಳ್ಳತನ ವಿಷಯ ಊರಿಗೆ ಗೊತ್ತಾಗುತ್ತೆ ಎಂದು ಸೂಳೆಕೆರೆ ಗುಡ್ಡದ ಬಳಿ ಚಂದ್ರನಾಯ್ಕ್ ನನ್ನು ಕರೆಸಿಕೊಂಡ ಚೇತನ್ ನಾಯ್ಕ್ , ಧಾರವಾಡದಿಂದ ಕಳ್ಳತನ ಮಾಡಿಕೊಂಡು ಬಂದಿದ್ದ ಪಿಸ್ತೂಲ್ ನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದರು.
ಈ ಪ್ರಕರಣದಲ್ಲಿ ಆರೋಪಿ ಪತ್ತೆಗೆ ಡಿಎಆರ್ ಶ್ವಾನ ದಳದಲ್ಲಿನ ಡಾಬರ್ ಮನ್ ತಳಿಯ ತುಂಗಾ ಮಹತ್ವದ ಪಾತ್ರ ವಹಿಸಿದೆ. ಹನ್ನೊಂದು ಕಿಲೋಮೀಟರ್ ಹೋಗಿ ಆರೋಪಿ ಸುಳಿವು ನೀಡಿದೆ. ಈ ಕೊಲೆ ಪ್ರಕಣದಲ್ಲಿ ಭಾಗಿಯಾದ ಇನ್ನು ಕೆಲವರು ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗೆ ಕಾರ್ಯ ಮುಂದುವರೆದಿದೆ. ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಪತ್ತೆಯಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹನುಮಂತರಾಯ ಪ್ರಸಂಶೆ ವ್ಯಕ್ತಪಡಿಸಿದ್ದಾರೆ.