ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಐಎಎಸ್, ಐಪಿಎಸ್, ಕೆಎಎಸ್ ಮತ್ತಿತರ ಪರೀಕ್ಷೆಗಳಿಗೆ ಸಿದ್ಧತೆಯ ತರಬೇತಿ ಮತ್ತು ಮಾರ್ಗದರ್ಶನ ಪ್ರವೇಶ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ ವಿಶ್ವವಿದ್ಯಾನಿಲಯದ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ತರಗತಿಗಳು ನಡೆಯಲಿದ್ದು, ಕೇವಲ 60 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. 30 ಸೀಟುಗಳು ದಾವಣಗೆರೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ. ಪ್ರವೇಶ ಪರೀಕ್ಷೆ ಮೂಲಕ ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುವುದು. ಅರ್ಜಿ ಸಲ್ಲಿಸಲು 2020 ರ ಜನವರಿ 6 ಕೊನೆಯ ದಿನ. ಜನವರಿ 12 ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ಜನವರಿ 16 ರಿಂದ ತರಗತಿಗಳು ಆರಂಭವಾಗಲಿವೆ.
ಪದವಿ ಪಡೆದ ಅಭ್ಯರ್ಥಿಗಳು ಮತ್ತು ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ತರಬೇತಿಗಾಗಿ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಅವರ ಮಾರ್ಗದರ್ಶನದಲ್ಲಿ ಬೋಧಕ ಸಿಬ್ಬಂದಿ ಮತ್ತು ವಿವಿಧ ವಿಷಯಗಳ ಸಂಪನ್ಮೂಲ ವ್ಯಕ್ತಿಗಳು, ಹಿರಿಯ ಅಧಿಕಾರಿಗಳು, ತಜ್ಞರಿಂದ ತರಬೇತಿ ನೀಡಲಾಗುವುದು.ನಿಗದಿತ ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಯನ್ನು ವಿಶ್ವವಿದ್ಯಾನಿಲಯದ ವೆಬ್‍ಸೈಟ್ davangereuniversity.ac.in ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಪ್ರಾಂಶುಪಾಲರು, ವಿಶ್ವವಿದ್ಯಾನಿಲಯದ ದೃಶ್ಯಕಲಾ ಕಾಲೇಜು, ವಿದ್ಯಾನಗರ, ದಾವಣಗೆರೆ ಅಥವಾ ಸಂಯೋಜನಾಧಿಕಾರಿಗಳು, ರಾಜ್ಯಶಾಸ್ತ್ರ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ ಶಿವಗಂಗೋತ್ರಿ, ದಾವಣಗೆರೆ, ಇವರಿಂದ ಅರ್ಜಿ ಪಡೆಯಬಹುದು ಎಂದು ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಡಾ.ಅಶೋಕಕುಮಾರ ಪಾಳೇದ ತಿಳಿಸಿದ್ದಾರೆ.



