Connect with us

Dvgsuddi Kannada | online news portal | Kannada news online

ಕೆಎಸ್‍ಆರ್ ಟಿಸಿ ಎಲ್ಲಾ ಬಸ್ ಕಾರ್ಯಾಚರಣೆಗೆ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸೂಚನೆ

ಪ್ರಮುಖ ಸುದ್ದಿ

ಕೆಎಸ್‍ಆರ್ ಟಿಸಿ ಎಲ್ಲಾ ಬಸ್ ಕಾರ್ಯಾಚರಣೆಗೆ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸೂಚನೆ

ಡಿವಿಜಿ ಸುದ್ದಿ, ದಾವಣಗೆರೆ: ಕೋವಿಡ್ ಹಿನ್ನೆಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳಿಗೆ ಆಗಿರುವ ಹಾನಿಯನ್ನು ತಗ್ಗಿಸಲು ಆಡಳಿತಾತ್ಮಕ ವೆಚ್ಚಗಳನ್ನು ಕಡಿತಗೊಳಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಹಾಗೂ ರಾಜ್ಯದಲ್ಲಿ ಎಸಿ ಬಸ್ ಸೇರಿದಂತೆ ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ದಿನ 24 ಗಂಟೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ  ಸಾರಿಗೆ ಸಚಿವ ಲಕ್ಷ್ಮಣ್  ಸವದಿ ತಿಳಿಸಿದರು.

ದಾವಣಗೆರೆ ಕೆಎಸ್‍ಆರ್‍ಟಿಸಿ ವಿಭಾಗ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಕೆಎಸ್‍ಆರ್‍ಟಿಸಿ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ  ಮಾತನಾಡಿದರು.

ಕೋವಿಡ್ ನಿಯಂತ್ರಣ ಹಿನ್ನೆಲೆ ಘೋಷಿಸಲಾಗಿರುವ ಲಾಕ್‍ಡೌನ್‍ನಿಂದ ನಾಲ್ಕು ನಿಗಮಗಳಿಂದ ಈ ತಿಂಗಳವರೆಗೆ ರೂ.1800 ಕೋಟಿ ನಷ್ಟ ಆಗಿದೆ. ಇನ್ನೂ ಹೀಗೆ ಮುಂದುವರೆಗೆ ಏನೆಲ್ಲ ಕ್ರಮ ಕೈಗೊಳ್ಳಬೇಕೆಂದು ಚಿಂತಿಸಬೇಕಿದೆ. ಅಧಿಕಾರಿಗಳ ನೌಕರರ ಸಂಬಳಕ್ಕೆ ರೂ. 326 ಕೋಟಿ ಅವಶ್ಯಕತೆ ಇದೆ. ಆದ್ದರಿಂದ ನಿಗಮಗಳ ಆಡಳಿತಾತ್ಮಕ ವೆಚ್ಚನ್ನು ಹೇಗೆ ಕಡಿತಗೊಳಿಸಬೇಕೆಂಬ ಬಗ್ಗೆ ಕ್ರಮ ವಹಿಸಬೇಕು ಎಂದರು.

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇದಕ್ಕಾಗಿ ಬಸ್ಸಿನಲ್ಲಿ ಶೇ.52 ಸೀಟಿಂಗ್ ಮಾತ್ರ ಹಾಕಿಕೊಳ್ಳಬೇಕು. ಇದರಿಂದ 54 ಜನರು ಕೂರುವ ಬಸ್ಸಿನಲ್ಲಿ 30 ಜನರಿಗೆ ಮಾತ್ರ ಅವಕಾಶ ನೀಡಬೇಕಿದೆ. ಈ ಕಾರಣದಿಂದ ಆದಾಯ ಕುಂಠಿತವಾಗಿದೆ.

ಹಾಗೂ ಎಸಿ ಬಸ್‍ಗಳಿಗೆ ಅವಕಾಶ ಇಲ್ಲ. ಅಂತರ ರಾಜ್ಯ ಓಡಾಟ ಇಲ್ಲ. ಜೊತೆಗೆ ಬೆಳಗಿನ ವೇಳೆಗೆ ಮಾತ್ರ ಸೀಮಿತಗೊಂಡಿರುವುದು ಕೂಡ ಆದಾಯ ಕುಂಠಿತಕ್ಕೆ ಕಾರಣಗಳಾಗಿವೆ. ಇವೆಲ್ಲ ಸಮಸ್ಯೆಗಳಿಗೆ ಪರಿಹಾರೋಪಾಯ ಕಂಡುಕೊಂಡು ಆದಾಯ ಹೆಚ್ಚಿಸುವ ಪ್ರಯತ್ನ ಮಾಡಬೇಕಿದೆ ಎಂದರು.

ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ.ಪ್ರಭಾಕರ ರೆಡ್ಡಿ ಮಾತನಾಡಿ, ಪ್ರತಿ ಕಿ.ಮೀ ಗೆ ರೂ.34 ಖರ್ಚು ಬರುತ್ತಿದ್ದರೆ ರೂ.24 ಆದಾಯವಿದೆ. ರೂ.12 ನಷ್ಟ ಸಂಭವಿಸುತ್ತಿದೆ. ಇದೀಗ ಸಾಮಾಜಿಕ ಅಂತರ ಹಾಗೂ ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆವರೆಗೆ ಬಸ್ ಓಡಿಸುತ್ತಿರುವುದರಿಂದ ಶೇ 15 ರಿಂದ 20 ಅಂದರೆ 1 ಕೋಟಿ ಆದಾಯ ಮಾತ್ರ ಬರುತ್ತಿದೆ. ಇನ್ನು ಶಾಲಾ ಕಾಲೇಜು ಆರಂಭವಾದರೆ ಸಾಮಾಜಿಕ ಅಂತರವೂ ಕಷ್ಟ ಆಗುತ್ತದೆ ಎಂದರು.

ಕೆಎಸ್‍ಆರ್‍ಟಿಸಿ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್ ಮಾತನಾಡಿ, ಅಂತರರಾಜ್ಯ ಮತ್ತು ಬೆಂಗಳೂರಿಗೆ ತೆರಳುವ ಬಸ್ಸುಗಳಿಂದ ಲಾಭ ಇದೆ. ಈ ಕಾರ್ಯಾಚರಣೆ ಆರಂಭವಾದ ಮೇಲೆ ಸ್ವಲ್ಪ ಸುಧಾರಣೆ ಕಾಣಬಹುದು. ನಿಗಮದಲ್ಲಿ ಸಾಕಷ್ಟು ಜನರು ಹೊರ ಗುತ್ತಿಗೆ ಆಧಾರದಲ್ಲಿ ನೌಕರರು ಇದ್ದು, ಅಗತ್ಯವಿರುವ ಇಲಾಖೆಗಳಿಗೆ ಇವರನ್ನು ನಿಯೋಜಿಸುವ ಮೂಲಕ ಆಡಳಿತಾತ್ಮಕ ವೆಚ್ಚ ತಗ್ಗಿಸಬಹುದು ಎಂದರು.

ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಶಿವಕುಮಾರಯ್ಯ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಡಿ ರೂ.120 ಕೋಟಿ ವೆಚ್ಚದಲ್ಲಿ ವಿನೂತನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಳೆಯ ಟೆಂಡರ್‍ದಾರರು ದರ ಹೊಂದಾಣಿಕೆ ಮಾಡಿಕೊಳ್ಳದ ಕಾರಣ ಹೊಸ ಟೆಂಡರ್ ಕರೆಯುವಂತೆ ಸಚಿವರು ಸ್ಮಾರ್ಟ್‍ಸಿಟಿ ಎಂ.ಡಿ ರವೀಂದ್ರ ಮಲ್ಲಾಪುರ ಇವರಿಗೆ ಸೂಚಿಸಿದರು.

ಸಂಸದ ಜಿ.ಎಂ ಸಿದ್ದೇಶ್ವರ್ ಮಾತನಾಡಿ, ಚನ್ನಗಿರಿಯಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ನಿರ್ಮಿಸಲು ಜಾಗ ಹುಡುಕಬೇಕು. ಮಾಯಕೊಂಡದಲ್ಲಿ ಜಾಗ ಇದ್ದು ಇಲ್ಲಿ ಒಂದು ಕೆಎಸ್‍ಆರ್‍ಟಿಸಿ ಡಿಪೋ ಆಗಬೇಕು. ಹಾಗೂ ಸಂತೆಬೆನ್ನೂರು ಮತ್ತು ತ್ಯಾವಣಗಿಯಲ್ಲಿ ನಿಲ್ದಾಣ ನಿರ್ಮಾಣ ಆಗಬೇಕಿದೆ. ಹಾಗೂ ರೂ.14 ಕೋಟಿ ವೆಚ್ಚದಲ್ಲಿ ಹರಿಹರ ಬಸ್‍ನಿಲ್ದಾಣ ಉನ್ನತೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನೇಕ ಹಳ್ಳಿಗಳಿಗೆ ಬಸ್ ಬೇಕೆಂದು ಬೇಡಿಕೆ ಇದೆ. ಅಲ್ಲಿಗೆ ಬಸ್‍ಗಳನ್ನು ಬಿಡಬೇಕು ಎಂದರು.

ಸಚಿವರು ಪ್ರತಿಕ್ರಿಯಿಸಿ ದಾವಣಗೆರೆ ವಿಭಾಗಕ್ಕೆ 63 ಹೊಸ ಬಸ್‍ಗಳನ್ನು ನೀಡಲಾಗಿದೆ. ಇನ್ನು ಮುಂದೆ ಅವು ಕಾರ್ಯಾರಂಭ ಮಾಡಲಿವೆ. ಸ್ಮಾರ್ಟ್ ಸಿಟಿ ಯೋಜನೆಯಡಿಯ ಬಸ್ ನಿಲ್ದಾಣಗಳ ಕಾಮಗಾರಿಗಳನ್ನು ಆದಷ್ಟು ಶೀಘ್ರದಲ್ಲಿ ಕೈಗೊಳ್ಳಲು ಕ್ರಮ ಕೈಗೊಳ್ಳಬೇಕು ಎಂದರು.

ಪರಿಸರ ಮತ್ತು ಸಿಬ್ಬಂದಿ ನಿರ್ದೇಶಕಿ ಕವಿತಾ ಎಸ್ ಮನ್ನಿಕೇರಿ ಮಾತನಾಡಿ, ನಿಗಮಗಳಿಗೆ ಆಗಿರುವ ಹಾನಿಯನ್ನು ತಗ್ಗಿಸುವ ಮತ್ತು ಸಮತೋಲನ ಕಾಪಾಡಿಕೊಳ್ಳುವ ಬಗ್ಗೆ ಸಲಹೆಗಳನ್ನು ನೀಡಿದರು.

ಸಾರಿಗೆ ಸಂಜೀವಿನಿ – ಮೊಬೈಲ್ ಕೋವಿಡ್ ಫಿವರ್ ಸೆಂಟರ್‍ಗೆ ಚಾಲನೆ : ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಜ್ವರ ತಪಾಸಣೆ ಹಾಗೂ ಕೋವಿಡ್ ಪರೀಕ್ಷೆಗಾಗಿ ಸ್ವ್ಯಾಬ್ ಸಂಗ್ರಹ ವ್ಯವಸ್ಥೆಯನ್ನು ಮಾಡಿರುವ ಮೊಬೈಲ್ ಕೋವಿಡ್-19 ಮೊಬೈಲ್ ಫಿವರ್ ಸೆಂಟರ್‍ಗೆ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಹಾಗೂ ಸಂಸದರಾದ ಜಿ.ಎಂ.ಸಿದ್ದೇಶ್ವರ್ ಇಂದು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಕೋವಿಡ್ ವಾರಿಯರ್ಸ್‍ಗೆ ಅಭಿನಂದನೆ : ಕೋವಿಡ್ ಕರ್ತವ್ಯ ನಿರ್ವಹಿಸಿದ್ದ ವಾಹನ ಚಾಲಕರು ಮತ್ತು ನಿರ್ವಾಹಕರಿಗೆ ಸಚಿವರಾದ ಲಕ್ಷ್ಮಣ ಸವದಿ, ಬಿ.ಎ ಬಸವರಾಜ ಮತ್ತು ಸಂಸದರಾದ ಜಿ.ಎಂ ಸಿದ್ದೇಶ್ವರ ಪುಷ್ಪ ಎರಚುವ ಮೂಲಕ ಹಾಗೂ ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿದರು.

ಸಭೆಯಲ್ಲಿ ನಗರಾಭಿವೃದ್ದಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ, ಪಾಲಿಕೆ ಮಹಾಪೌರ ಬಿ.ಜಿ.ಅಜಯಕುಮಾರ್, ಎಸ್‍ಪಿ ಹನುಮಂತರಾಯ ಉಪಸ್ಥಿತರಿದ್ದರು.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top