ಡಿವಿಜಿ ಸುದ್ದಿ, ದಾವಣಗೆರೆ: ಎಸ್ಐ ಮಾರ್ಕಿನ ಫುಲ್ ಹೆಲ್ಮೆಟ್ ಕಡ್ಡಾಯ ಮಾಡಿರುವ ರಾಜ್ಯ ಸರ್ಕಾರ, ಹೆಲ್ಮೆಟ್ ಕಂಪನಿಗಳಿಂದ ಹಣ ಪಡೆದು ಜನ ಸಾಮಾನ್ಯರಿಂದ ಸುಲಿಗೆ ನಿಂತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಹಾಗೂ ಪೊಲೀಸರಿಗೆ ಆದಾಯ ಗಳಿಸುವ ಅಕ್ರಮ ಮರಳು ಮಾಫಿಯಾ, ಬಿಟ್ಟಿಂಗ್ ದಂಧೆ ಸೇರಿದಂತೆ ಬೇರ, ಬೇರೆ ಮೂಲಗಳಿವೆ. ಅವುಗಳಿಂದ ದಂಡ ವಸೂಲಿ ಮಾಡಿಕೊಳ್ಳಲಿ. ಅದನ್ನು ಬಿಟ್ಟು ಬಡ ರೈತರು ಹಾಗೂ ಸಾಮಾನ್ಯ ಜನರ ಮೇಲೆ ಹೆಲ್ಮೆಟ್ ವಿಚಾರವಾಗಿ ದಂಡ ಹಾಕುವುದು ಸರಿಯಲ್ಲ. ಜಿಲ್ಲಾ ಪೊಲೀಸರು ಕೊರೊನಾ ಸಂಕಷ್ಟ ಸಮಯದಲ್ಲಿ ಈ ರೀತಿ ದಂಡ ಹಾಕುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಇದನ್ನು ಓದಿ: ದಾವಣಗೆರೆ: ಐಎಸ್ ಐ ಮಾರ್ಕ್ ಇಲ್ಲದ, ಅರ್ಧ ಹೆಲ್ಮೆಟ್ ಹಾಕೊಂಡು ಬಂದ್ರೆ ಬೀಳುತ್ತೇ ದಂಡ..!
ಆಜಾದ್ ನಗರ್, ಶಾಂತಿ ಟಾಕೀಸ್, ಅಶೋಕ ಟಾಕೀಸ್ ಹೀಗೆ ಹಳೆ ದಾವಣಗೆರೆಯಲ್ಲಿ ಗುಂಪು ಗುಂಪಾಗಿ ನಿಂತು ಪೊಲೀಸರು ದಂಡ ವಸೂಲಿ ಮಾಡುದ್ದಾರೆ. ಈ ರೀತಿ ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿಯೂ ದಂಡ ಹಾಕುತ್ತಿಲ್ಲ. ಆದರೆ, ದಾವಣಗೆರೆಯಲ್ಲಿ ಏನು ಸ್ಪೆಷಲ್ ಎಂದು ಪಾಲಿಕೆ ವಿಪಕ್ಷನಾಯಕ ಎ ನಾಗರಾಜ್ ಪ್ರಶ್ನಿಸಿದರು.
ಸರ್ಕಾರ ಪೊಲೀಸ್ ಇಲಾಖೆ ಗೆ ಟಾರ್ಗೆಟ್ ನೀಡಿದ್ದು, ಒಬ್ಬೊಬ್ಬ ಎಎಸ್ಐ ಗಳಿಗೆ ಇಷ್ಟಿಷ್ಟು ಕೇಸ್ ಹಾಕಬೇಕೆಂದು ಹೇಳಲಾಗಿದೆ. ಹಾಗಾಗಿ ಪೊಲೀಸ್ ಸಿಬ್ಬಂದಿ ಟಾರ್ಗೆಟ್ ಮುಟ್ಟಲು ಮಾನವೀಯತೆ ಮರೆತು, ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಪಾಲಿಕೆಯ ಸದಸ್ಯ ಗಡಿ ಗುಡಾಳ್ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಚೌಕಿಪೇಟೆ, ಕಾಳಿಕಾ ದೇವಿ ರಸ್ತೆಗಳಲ್ಲಿ ಪೊಲೀಸ್ ಸಿಬ್ಬಂದಿ ಅಂಗಡಿ ಮಾಲೀಕರು ಗಳಿಂದ ಹಣ ಪಡೆದು ವಾಹನ ನಿಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲಿ ಇಲ್ಲದ ಕಾನೂನು ಸಾಮಾನ್ಯ ಜನರ ಮೇಲೆ ಯಾಕೆ ವಿಧಿಸುತ್ತೀರಿ. ಸರ್ಕಾರ ಕೋವಿಡ್ 19 ಗೆ ಔಷಧಿ ಬರುವವರೆಗೂ ಜನಸಾಮಾನ್ಯರಿಂದ ದಂಡ ವಸೂಲಿ ಮಾಡಬಾರದು ಎಂದು ಪಾಲಿಕೆ ಸದಸ್ಯ ಕೆ. ಚಮನ್ ಸಾಬ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್, ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ.ಎಲ್. ಹರೀಶ್ ಬಸಾಪುರ, ಮುಖಂಡರಾದ ಶ್ರೀಕಾಂತ್ ಬಗೆರ, ಶಿವಾಜಿರಾವ್ ಯುವರಾಜ್ ಉಪಸ್ಥಿತರಿದ್ದರು.