ಡಿವಿಜಿ ಸುದ್ದಿ, ದಾವಣಗೆರೆ: ಮಕ್ಕಳ ಯಶಸ್ಸಿನಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದ್ದು, ಶಿಕ್ಷಕರಷ್ಟೇ ಜವಾಬ್ದಾರಿಯನ್ನು ಪೋಷಕರು ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ಬಾಪೂಜಿ ವಿದ್ಯಾಸಂಸ್ಥೆಯ ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಬಿ.ಇ. ರಂಗಸ್ವಾಮಿ ಅಭಿಪ್ರಾಯಪಟ್ಟರು.
ಆವರಗೆರೆಯ ಸಿದ್ಧಲಿಂಗೇಶ್ವರ ವಿದ್ಯಾ ಸಂಸ್ಥೆಯ ಶ್ರೀ ಜಿ.ಪಿ.ಜಿ.ಎಂ. ಶಾಲೆಯಲ್ಲಿ ನಡೆದ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ಮಗುವಿಗೆ ಸಾಮಾನ್ಯ ಜ್ಞಾನ ಮುಖ್ಯ ಅಷ್ಟೇ ಅಲ್ಲ ಉತ್ತಮವಾದ ಸಂಸ್ಕೃತಿಯನ್ನು ಬೆಳೆಸಬೇಕು. ಮಕ್ಕಳಿಗೆ ಇತಿಮಿತಿಯಲ್ಲಿ ಶಿಕ್ಷಣ ನೀಡದೇ ಅವರ ಸಾಮರ್ಥ್ಯ, ನ್ಯೂನ್ಯತೆ ತಿಳಿದುಕೊಂಡು ಸಾಮರ್ಥ್ಯ ತುಂಬಬೇಕು. ಅಡುಗೆ ಮನೆಯೂ ಸಹ ಮಗುವಿಗೆ ಪ್ರಯೋಗ ಶಾಲೆಯಂತೆ ಭಾಸವಾಗಬೇಕು. ಇದರಿಂದ ಮಗುವು ಸಾಮಾನ್ಯ ವಿಜ್ಞಾನ ತಿಳಿಯಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಡಿ.ಆರ್.ಎಂ. ಕಾಲೇಜಿನ ನಿವೃತ್ತ ಅಧ್ಯಾಪಕ ರೇಣುಕಾ ಪ್ರಸಾದ್ ಮಾತನಾಡಿ, ಯಾವುದೇ ವಿಷಯವನ್ನು ಅಭ್ಯಾಸ ಮಾಡಲು ಏಕಾಗ್ರತೆ ತುಂಬಾ ಮುಖ್ಯ. ಸಮೂಹ ಮಾಧ್ಯಮಗಳಾದ ಟಿ.ವಿ. ಮೊಬೈಲ್ ಮಕ್ಕಳ ಏಕಾಗ್ರತೆ ಹಾಳು ಮಾಡುತ್ತಿವೆ. ಮಕ್ಕಳನ್ನು ಇವುಗಳಿಂದ ದೂರವಿಡಬೇಕು. ಪೋಷಕರು ಕೂಡ ಮಕ್ಕಳ ಜೊತೆಯಲ್ಲಿ ಇರುವಾಗ ಟಿ.ವಿ. ಮೊಲೈಲ್ ಬಳಕೆ ಆದಷ್ಟು ಕಡಿಮೆ ಮಾಡಬೇಕು ಎಂದು ತಿಳಿಸಿದರು.
ಶಾಲೆಯಲ್ಲಿ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನ ಆಯೋಜಿಸುವುದರಿಂದ ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಎ.ಹೆಚ್. ಶಿವಮೂರ್ತಿಸ್ವಾಮಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಎಂ. ಗುರುಸಿದ್ದ ಸ್ವಾಮಿಯವರು ಉಪಸ್ಥಿತರಿದ್ದರು. ಸಮಾರಂಭದ ಕೊನೆಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಚಟುವಟಿಕೆ ಹಾಗೂ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದ 300 ಕ್ಕೂ ಹೆಚ್ಚು ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿ ಪಲ್ಲವಿ ವಿ, ಸ್ವಾಗತವನ್ನು ಲಕ್ಷ್ಮೀ ಹಾಗೂ ವಂದನಾಪಣೆಯನ್ನು ಅನುಷಾ ಬಿ. ನೆರವೇರಿಸಿದರು.



