ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ನಡೆದು 2 ತಿಂಗಳು ಕಳೆದರೂ ಮೇಯರ್, ಉಪಮೇಯರ್ ಆಯ್ಕೆ ಮಾಡದಿರುವ ಸರ್ಕಾರದ ನಿರ್ಧಾರ ಖಂಡಿಸಿ ಹೈಕೋರ್ಟ್ ಮೊರೆ ಹೋಗಬೇಕಾಗುತ್ತದೆ ಎಂದು ಸಕಾಂಗ್ರೆಸ್ ಪಾಲಿಕೆ ಸದಸ್ಯರು ಎಚ್ಚರಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್, ನವೆಂಬರ್ 12 ರಂದು ದಾವಣಗೆರೆ ಮಹಾನಗರ ಪಾಲಿಕೆಯ 45 ವಾರ್ಡ್ ಗಳಿಗೆ ಚುನಾವಣೆ ನಡೆದಿತ್ತು. ಫಲಿತಾಂಶ ಪ್ರಕಟವಾಗಿ ಎರಡು ತಿಂಗಳು ಕಳೆದರೂ ಇಲ್ಲಿವರೆಗೂ ಚುನಾಯಿತ ಪ್ರತಿನಿಧಿಗಳನ್ನು ಕರ್ನಾಟಕ ಸರ್ಕಾರದ ರಾಜ್ಯ ಪತ್ರದಲ್ಲಿ ಪ್ರಕಟಿಸಿಲ್ಲ. ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿದ್ದರೂ, ಚುನಾವಣೆ ನಡೆಸದಿರುವ ಧೋರಣೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಈ ಕೂಡಲೇ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸಬೇಕು ಎಂದು ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಗೆ ರಿಜಿಸ್ಟರ್ ಪೋಸ್ಟ್ ಮೂಲಕ ಮನವಿ ಮಾಡಿದ್ದೇವೆ ಎಂದರು.
ಬಿಜೆಪಿ ವಾಮ ಮಾರ್ಗದ ಮೂಲಕ ಅಧಿಕಾರ ಹಿಡಿಯಲು ಮೇಯರ್ ಚುನಾವಣೆಯನ್ನು ಮುಂದೂಡುತ್ತಾ ಬರುತ್ತಿದೆ. ಪಾಲಿಕೆಯ 45 ಸ್ಥಾನಗಳಲ್ಲಿ ಕಾಂಗ್ರೆಸ್ 22 ಸ್ಥಾನ ಗೆದ್ದಿದೆ. ಇದಲ್ಲದೆ ಶಾಸಕರು, ಪರಿಷತ್ ಸದಸ್ಯರು ಮತ್ತು ಪಕ್ಷೇತರ ಸಸ್ಯರ ಬಲದೊಂದಿಗೆ ಸ್ಪಷ್ಟ ಬಹುಮಾತದ ಮೂಲಕ ಅಧಿಕಾರ ಹಿಡಿಯಲಿದೆ ಎಂದರು.
ಪಾಲಿಕೆ ಸದಸ್ಯ ಎ. ನಾಗರಾಜ್ ಮಾತನಾಡಿ, ಈಗಾಗಲೇ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ಅಧಿಕಾರಿ ವರ್ಗಕ್ಕೆ ನೂತನ ಸದಸ್ಯರನ್ನು ಪರಿಚಯಿಸಬೇಕು. ಜೊತೆ ಮೇಯರ್ ಚನಾವಣೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದ್ದೇವೆ. ಅವರು, ಗೆಜೆಟ್ ನೋಟಿಫಿಕೇಷನ್ ಆಗದೆ ಏನು ಮಾಡಲು ಸಾಧ್ಯವಿಲ್ಲ ಹೇಳುತ್ತಿದ್ದಾರೆ ಎಂದರು.
ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಿ
ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಗಂಗಾ ಬಸವರಾಜ್ ಮಾತನಾಡಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಸಮಾಜದಲ್ಲಿ ಕೋಮುವಾದ ವಾತಾವರಣ ನಿರ್ಮಾಣವಾಗುವಂತಹ ಹೇಳಿಕೆ ನೀಡುತ್ತಿದ್ದಾರೆ. ಮುಸ್ಲಿಂರನ್ನು ಭಯೋತ್ಪಾದಕರು ಎಂದು ಬಿಂಬಿಸುತ್ತಿದ್ದಾರೆ. ಹೀಗಾಗಿ ರೇಣುಕಾಚಾರ್ಯ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ದೇವರಮನೆ ಶಿವಕುಮಾರ್, ಮಂಜುನಾಥ್ ಗಡಿಗುಡಾಳ್, ಅಬ್ದುಲ್ ಲತೀಫ್, ಯಶೋಧ ಉಮೇಶ್, ಸೈಯದ್ ಚಾರ್ಲಿ, ಕೆ. ಚಮನ್ ಸಾಬ್ , ಶ್ರೀನಿವಾಸ್, ಉದಯ್ ಕುಮಾರ್, ಲಿಯಾಖತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.