ಡಿವಿಜಿ ಸುದ್ದಿ, ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ4ರ ನಿಧಾನಗತಿ ಅಗಲೀಕರಣ ಕಾಮಗಾರಿಯಿಂದ ಜನರಿಗೆ ತೊಂದರೆ ಆಗುತ್ತಿದ್ದು, ಕಾಮಗಾರಿಗೆ ಚುರುಕು ಮುಟ್ಟಿಸಿ ಆರು ತಿಂಗಳೊಳಗೆ ಮುಗಿಸಬೇಕೆಂದು ಅಧಿಕಾರಿಗಳಿಗೆ ಸಂಸದರಾದ ಜಿ.ಎಂ.ಸಿದ್ದೇಶ್ವರ ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಇಂದು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು, ಈ ಯೋಜನೆಯಡಿ ದಾವಣಗೆರೆ ತಾಲ್ಲೂಕಿನಲ್ಲಿ 14 ಮತ್ತು ಹರಿಹರ ತಾಲ್ಲೂಕಿನಲ್ಲಿ 04 ಗ್ರಾಮ ಸೇರಿದಂತೆ ಒಟ್ಟು 18 ಗ್ರಾಮಗಳು ಬರುತ್ತವೆ. ಜಿಲ್ಲೆಯಲ್ಲಿ 46.5 ಕಿ.ಮೀ ರಸ್ತೆ ಹಾದು ಹೋಗಲಿದ್ದು, 28.68 ಹೆಕ್ಟೇರ್ ಪ್ರದೇಶವನ್ನು ಭೂಸ್ವಾಧೀನಪಡಿಸಲಾಗುವುದು.
ಆರು ಪಥ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶೇ.98.62 ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಶಾಮನೂರು ಮತ್ತು ಹೆಚ್ ಕಲಪನಹಳ್ಳಿಯಲ್ಲಿ ಒಟ್ಟು 1 ಹೆಕ್ಟೇರ್ ಜಮೀನು ಅನುಮೋದನೆಗೆ ಬಾಕಿ ಇದೆ. ವಿಶೇಷ ಭೂಸ್ವಾನಾಧಿಕಾರಿಗಳು, ಸಂಬಂಧಿಸಿದ ತಹಶೀಲ್ದಾರ್ ಗಳು ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.
ಅಂಡರ್‍ಪಾಸ್‍ಗಳಲ್ಲಿ ರಸ್ತೆ ಸರಿಪಡಿಸುವುದು ಮತ್ತು ಅವಶ್ಯಕತೆ ಇರುವೆಡೆ ಅಂಡರ್‍ಪಾಸ್ ನಿರ್ಮಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಬನಶಂಕರಿ ಬಡಾವಣೆ ಮತ್ತು ವಿದ್ಯಾನಗರದಲ್ಲಿ ಸರ್ವಿಸ್ ರಸ್ತೆ ಆಗಿಲ್ಲ, ಹೈಟೆನ್ಶನ್ ಲೈನ್‍ಗಳ ಶಿಫ್ಟಿಂಗ್ ಆಗಬೇಕು. ಜೂನ್ 2020 ರೊಳಗೆ ಈ ಯೋಜನೆ ಮುಗಿಯಬೇಕಿತ್ತು. ಆದರೆ ಕೊರೊನಾ ಹಿನ್ನೆಲೆ ಸರ್ಕಾರವೇ ಆರು ತಿಂಗಳು ಹೆಚ್ಚುವರಿ ಅವಧಿ ನೀಡಿದ್ದು ಈ ವರ್ಷಾಂತ್ಯದಲ್ಲಿ ಎನ್‍ಹೆಚ್ ಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಮುಗಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಆರು ಪಥ ರಸ್ತೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಶೇ.98 ಮುಗಿದಿದ್ದು, ರೈತರಿಗೆ ಶೇ. 65 ಪರಿಹಾರ ಹಣ ನೀಡಲಾಗಿದೆ. ವಿಶೇಷ ಭೂಸ್ವಾಧೀನಾಧಿಕಾರಿಗಳು ಇನ್ನುಳಿದ ಭೂಸ್ವಾಧೀನ ಹಾಗೂ ಪರಿಹಾರ ನೀಡಲು ತ್ವರಿತ ಕ್ರಮ ಕೈಗೊಳ್ಳಬೇಕು. ರೈತರ ಮನೆಗಳಿಗೆ ಹೋಗಿ ಮನವೊಲಿಸಬೇಕು. ಹಾಗೂ ಭೂಸ್ವಾಧೀನದ ಪರಿಹಾರದ ಹಣವನ್ನು ಅವರಿಗೆ ಸಕಾಲದಲ್ಲಿ ನೀಡಲು ಕ್ರಮ ಕೈಗೊಳ್ಳಬೇಕು ಎಂದರು.
ರಾಜನಹಳ್ಳಿ ಜಾಕ್ವೆಲ್‍ನಿಂದ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಇತ್ತೀಚೆಗೆ ಸ್ವಿಚ್ ಆನ್ ಮಾಡಿದ ದಿನವೇ ಎರಡು ಕಡೆ ಪೈಪ್‍ಲೈನ್ ಒಡೆದು, ಸೋರಿಕೆಯ ದೂರು ಬಂದಿದೆ. ಇರ್ಕಾನ್ ಸಂಸ್ಥೆಯವರು ಪೈಪ್‍ಲೈನ್ ಜೋಡಿಸುವ ವೆಲ್ಡಿಂಗ್ ಕೆಲಸವನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಬೇಕೆಂದು ಸೂಚಿಸಿ ಉತ್ತಮವಾಗಿ ನಿರ್ವಹಿಸುವಂತೆ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿ ದಾವಣಗೆರೆ ಜಿಲ್ಲೆಯ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ಬಗ್ಗೆ ಡಿಪಿಆರ್‍ನಲ್ಲಿ ಸಮರ್ಪಕವಾಗಿ ಯೋಜನೆ ತಯಾರಾಗಿಲ್ಲ. ನಮ್ಮದು ಸ್ಮಾರ್ಟ್‍ಸಿಟಿ, ಜೊತೆಗೆ ಶೈಕ್ಷಣಿಕ ನಗರ ಮತ್ತು ದೊಡ್ಡ ನಗರವಾಗಿದೆ. ಇಂತಹ ನಗರಕ್ಕೆ ಒಂದು ಉತ್ತಮ ಮತ್ತು ವ್ಯವಸ್ಥಿತವಾದ ಪ್ರವೇಶ ದ್ವಾರಕ್ಕೆ ಅಧಿಕಾರಿಗಳು ಯೋಜನೆ ರೂಪಿಸಿಲ್ಲ. ರಾಣೆಬೆನ್ನೂರಿನಂತಹ ನಗರದಲ್ಲಿ ಎಷ್ಟೊಂದು ಒಳ್ಳೆಯ ಪ್ರವೇಶದ್ವಾರವಿದೆ. ನನ್ನ ಕ್ಷೇತ್ರದಲ್ಲಿ ಒಂದು ಒಳ್ಳೆಯ ಪ್ರವೇಶದ್ವಾರವಿಲ್ಲವೆಂದರೆ ಹೇಗೆ ಎಂದು ಎನ್‍ಹೆಚ್ ಅಧಿಕಾರಿಗಳನ್ನು ಪ್ರಶ್ನಿಸಿ, ಸಮರ್ಪಕವಾದ ಸ್ಥಳದಲ್ಲಿ ಆದಷ್ಟು ಶೀಘ್ರದಲ್ಲಿ ದೊಡ್ಡದಾದ ಮತ್ತು ಉತ್ತಮವಾದ ಪ್ರವೇಶದ್ವಾರ ನಿರ್ಮಿಸಲು ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ರ ಪ್ರಾದೇಶಿಕ ಅಧಿಕಾರಿ ಸೂರ್ಯವಂಶಿ ಮಾತನಾಡಿ, ಹಲವೆಡೆ ತಾಂತ್ರಿಕ ತೊಂದರೆಗಳಿಂದ ರಸ್ತೆ ಅಗಲೀಕರಣ ಮತ್ತು ಅಂಡರ್‍ಪಾಸ್ ಕೆಲಸಗಳಲ್ಲಿ ಹಿನ್ನಡೆಯಾಗಿದೆ. ಮತ್ತೆ ಕೆಲವೆಡೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಇವನ್ನೆಲ್ಲ ಸರಿಪಡಿಸಿಕೊಂಡು ಇನ್ನು ಆರು ತಿಂಗಳ ಒಳಗೆ ಕೆಲಸ ನಿರ್ವಹಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಶಾಸಕರಾದ ಪ್ರೊ.ಲಿಂಗಣ್ಣ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ರಾಷ್ಟ್ರೀಯ ಹೆದ್ದಾರಿ ಯೋಜನೆಯ ಯೋಜನಾ ನಿರ್ದೇಶಕ ಶ್ರೀನಿವಾಸ ನಾಯ್ಡು, ಎಸಿ ಮಮತಾ ಹೊಸಗೌಡರ್, ರಾಷ್ಟ್ರೀಯ ಹೆದ್ದಾರಿ ಟೆಕ್ನಿಕಲ್ ಮ್ಯಾನೇಜರ್ ಮಲ್ಲಿಕಾರ್ಜುನ್, ಇರ್ಕಾನ್ ಕಂಪೆನಿಯ ಅಧಿಕಾರಿ ನಾಗರಾಜ್ ಪಾಟಿಲ್, ದೊಡ್ಡಯ್ಯ, ಪಿಎನ್‍ಸಿ ಏಜೆನ್ಸಿಯ ಕಂಟ್ರಾಕ್ಟರ್ ಬ್ಯಾನರ್ಜಿ, ಈರಪ್ಪ ಮೇಟಿ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ತಹಶೀಲ್ದಾರ್ ಗಿರೀಶ್ ಇತರೆ ಅಧಿಕಾರಿಗಳು ಇದ್ದರು.