ಡಿವಿಜಿ ಸುದ್ದಿ, ದಾವಣಗೆರೆ: ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ರೂ.25 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಈಗ ರೂ. 1 ಕೋಟಿ 75 ಲಕ್ಷ ಅನುದಾನ ಬಾಕಿ ಇದೆ. ಬಾಕಿ ಇರುವ ಅನುದಾನವನ್ನು ಕಟ್ಟಡಗಳ ಕಾಮಗಾರಿಯನ್ನು ಪೂರ್ಣಗೊಳಿಸಲು ಬಳಸಿಕೊಳ್ಳುವಂತೆ ಸಂಸದ ಜಿ.ಎಂ ಸಿದ್ದೇಶ್ವರ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಿ.18 ರಂದು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ದಾವಣಗೆರೆಗೆ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ರೂ.25 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ರೂ.23 ಕೋಟಿ 25 ಲಕ್ಷ ಕಟ್ಟಡಗಳ ಕಾಮಗಾರಿಗೆ ಬಳಸಲಾಗಿದೆ. ಈಗ ಉಳಿದಿರುವ ಹಣವನ್ನು ನಿರ್ಮಾಣ ಹಂತದಲ್ಲಿರುವ ಕಟ್ಟಡ ಕಾಮಗಾರಿಗಳಿಗೆ ಮತ್ತು ಬಾಕಿ ಅನುದಾನ ಬಿಡುಗಡೆಗೆ ಬಳಸಿಕೊಂಡು ಪ್ರಗತಿ ಸಾಧಿಸಬೇಕೆದೆ ಎಂದರು.
ದಾವಣಗೆರೆ ಸೇರಿದಂತೆ 04 ತಾಲ್ಲೂಕುಗಳಲ್ಲಿ 16 ನೇ ಲೋಕಸಭಾ ಅವಧಿಯ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಬಾಕಿ ಇರುವ ಕಾಮಗಾರಿಗಳ ಬಗ್ಗೆ ತಾಲ್ಲೂಕು ಅಧಿಕಾರಿಗಳಿಂದ ಮಾಹಿತಿ ಪಡೆದರು. ಮತ್ತು ಈಗಾಗಲೇ ಪೂರ್ಣಗೊಂಡಿರುವ ಕಾಮಗಾರಿಗಳಿಳನ್ನು ಪರಿಶೀಲನೆ ನಡೆಸಿ, ಅಪೂರ್ಣಗೊಂಡಿರುವ ಕಾಮಗಾರಿಗಳನ್ನು 2020ರ ಫೆಬ್ರವರಿಯಲ್ಲಿ ಮುಕ್ತಾಯಗೊಳಿಸಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಪೂರ್ಣಗೊಂಡಿರುವ ಕಟ್ಟಡ ಕಾಮಗಾರಿಗಳ ದಾಖಲಾತಿಗಳನ್ನು ಜಿಲ್ಲಾಡಳಿತ ಕಚೇರಿಗೆ ಸಲ್ಲಿಸಿ, ಬಾಕಿ ಅನುದಾನವನ್ನು ಪಡೆದುಕೊಳ್ಳುವಂತೆ ಸೂಚಿಸಿದರು. ಹಾಗೂ ಪ್ರಗತಿ ಹಂತದಲ್ಲಿರುವ ಕಾಮಗಾರಿಗಳನ್ನು ಇನ್ನು ಮೂರು ತಿಂಗಳಲ್ಲಿ ಮುಗಿಸಬೇಕು ಮತ್ತು ಪ್ಲಾಸ್ಟರಿಂಗ್ ಹಂತದ ಕಾಮಗಾರಿಗಳನ್ನು ಒಂದು ವಾರದೊಳಗೆ ಮುಗಿಸಬೇಕು ಎಂದರು.
ಸಭೆಯಲ್ಲಿ ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ.ಜಿ, ಉಪ ವಿಭಾಗಧಿಕಾರಿ ಮಮತಾ ಹೊಸಗೌಡರ್ ಉಪಸ್ಥಿತರಿದ್ದರು.



