ಡಿವಿಜಿ ಸುದ್ದಿ, ದಾವಣಗೆರೆ: ಕೋವಿಡ್ ಹಿನ್ನೆಲೆಯಲ್ಲಿ ಲಾಕ್‍ಡೌನ್‍ನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನೀಡಲಾದ ಪರಿಹಾರ ಹಣವನ್ನು ಯಾವುದೇ ಕಾರಣಕ್ಕೂ ಫಲಾನುಭವಿಗಳ ಹಿಂಬಾಕಿ ಸಾಲಕ್ಕೆ ಮುರಿದುಕೊಳ್ಳದಂತೆ ನೋಡಿಕೊಳ್ಳಬೇಕೆಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸಂಸದ ಜಿ.ಎಂ.ಸಿದ್ದೇಶ್ವರ್ ಸೂಚನೆ ನೀಡಿದರು.
ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ (ಲೀಡ್ ಬ್ಯಾಂಕ್) ಸಿದ್ಧಪಡಿಸಿರುವ 2020-21ನೇ ಸಾಲಿನ ಜಿಲ್ಲಾ ವಾರ್ಷಿಕ ಪುಸ್ತಕ ಬಿಡುಗಡೆ ಹಾಗೂ ಜಿಲ್ಲಾ ಮಟ್ಟದ ಪುನರಾವಲೋಕನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ sಸರ್ಕಾರದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದವರಿಗೆ ಈ ಹಣ ನೀಡಲಾಗುತ್ತಿದ್ದು, ಒಂದು ವೇಳೆ ಫಲಾನುಭವಿಗಳ ಸಾಲ ಬ್ಯಾಂಕ್‍ಗಳಲ್ಲಿ ಬಾಕಿ ಇದ್ದರೆ, ಈ ಹಣವನ್ನು ಅದಕ್ಕೆ ಸರಿದೂಗಿಸಿಕೊಳ್ಳಬೇಡಿ. ಕಷ್ಟಕಾಲಕ್ಕೆ ಈ ಹಣ ಅವರ ಕೈಗೆ ಸಿಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು.
ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಾದ ಪಿ.ಎಂ.ಇ.ಜಿ.ಪಿ ಯೋಜನೆ, ಚೈತನ್ಯ ಯೋಜನೆ, ಉದ್ಯೋಗಿನಿ ಯೋಜನೆ, ಎಸ್‍ಸಿ, ಎಸ್‍ಟಿ ಕಾರ್ಪೊರೇಷನ್‍ನಿಂದ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಪಾರದರ್ಶಕತೆ ಕಾಣುತ್ತಿಲ್ಲ. ನಿಗದಿಪಡಿಸಿರುವ ಗುರಿಗಿಂತ ಹೆಚ್ಚು ಫಲಾನುಭವಿಗಳನ್ನು ಆಯ್ಕೆ ಮಾಡಿ ಬ್ಯಾಂಕ್‍ಗೆ ಕಳುಹಿಸಲಾಗಿರುತ್ತದೆ ಎಂದು ತಿಳಿಸಿದರು.
ಶೈಕ್ಷಣಿಕ ಸಾಲ ಪ್ರಸಕ್ತ ವರ್ಷದಲ್ಲಿ ಎಷ್ಟು ಪ್ರಮಾಣದ ಸಾಲ ಬಾಕಿ ಇದೆ ಅವಧಿ ಮುಗಿದಿದ್ದರೂ ಪಾವತಿಸದೇ ಇರುವ ಶೈಕ್ಷಣಿಕ ಸಾಲ ವಸೂಲಾತಿಗೆ ಕ್ರಮ ಕೈಗೊಳ್ಳಿ ಮತ್ತು ಇದನ್ನೆ ನೆಪವಾಗಿಟ್ಟುಕೊಂಡು ಈ ಶೈಕ್ಷಣಿಕ ವರ್ಷದಲ್ಲಿ ಸಾಲ ನೀಡಲು ಹಿಂದೇಟು ಹಾಕಬೇಡಿ ಎಂದರು.
ಲೀಡ್ ಬ್ಯಾಂಕ್‍ನ ವಿಭಾಗೀಯ ಪ್ರಬಂಧಕ ಸುಶೃತ್ ಡಿ.ಶಾಸ್ತ್ರೀ ಮಾತನಾಡಿ, ಕೋವಿಡ್ ಲಾಕ್‍ಡೌನ್‍ನಿಂದಾಗಿ ವಿವಿಧ ಯೋಜನೆಗಳಲ್ಲಿ ಬ್ಯಾಂಕ್‍ಗಳಲ್ಲಿ ಸಾಲ ಪಡೆದು ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಆ.30 ರವೆರೆಗೆ ಸಾಲದ ಕಂತು ಕಟ್ಟಲು ಅವಧಿ ವಿಸ್ತರಿಸಲಾಗಿದೆ. ಸಾಲ ಪಡೆದವರು ಸಂಬಂಧಿಸಿದ ಬ್ಯಾಂಕ್‍ಗಳಿಗೆ ತೆರಳಿ ಅರ್ಜಿ ನೀಡಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದರು.
ಒಟ್ಟು 3,13,157 ಜನ್‍ಧನ್ ಖಾತೆಗಳಿಗೆ ಕೇಂದ್ರದಿಂದ ಮೂರು ತಿಂಗಳೂ ತಲಾ ರೂ. 500 ರಂತೆ ಜಮಾ ಮಾಡಲಾಗಿದೆ. ಅದೇ ರೀತಿ ರಾಜ್ಯ ಸರ್ಕಾರದಿಂದಲೂ ಕ್ಷೌರಿಕರಿಗೆ, ಮಡಿವಾಳರಿಗೆ, ಆಟೋ ಮತ್ತು ಕ್ಯಾಬ್ ಚಾಲಕರಿಗೆ ಹಣ ಸಂದಾಯವಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಳೆದ ವರ್ಷ 2019-20ರ ಆರ್ಥಿಕ ವರ್ಷದಲ್ಲಿ ಕೃಷಿ, ಖಾಸಗಿ ವಲಯ ಸೇರಿದಂತೆ 4,425,70 ಕೋಟಿ ಸಾಲ ವಿತರಣೆ ಮಾಡುವ ಗುರಿ ಹೊಂದಲಾಗಿತ್ತು. ಅದರಲ್ಲಿ 4,431,87 ಕೋಟಿ ಸಾಲ ಅಂದರೆ ಶೇ. 101,35 ವಿತರಿಸುವ ಮೂಲಕ ನಿಗದಿತ ಗುರಿಗಿಂತ ಹೆಚ್ಚು ಸಾಧನೆ ಮಾಡಲಾಗಿದೆ ಎಂದು ವಿವರಣೆ ನೀಡಿದರು.
ಮುದ್ರಾ ಯೋಜನೆಯಡಿ 29,711 ಶಿಶು, 16,940 ಕಿಶೋರ, 631 ತರುಣ ಸೇರಿದಂತೆ ಒಟ್ಟು 47,332 ಖಾತೆಗಳಿದ್ದು, ಅದರಲ್ಲಿ 320 ಖಾತೆಗಳ ಅರ್ಜಿಗಳು ತಿರಸ್ಕøತಗೊಂಡಿವೆ. ಉಳಿದಂತೆ 715,41 ಕೋಟಿ ಹಣ ವಿತರಣೆ ಮಾಡಬೇಕಿರುವುದು ಬಾಕಿ ಉಳಿದಿದೆ ಎಂದು ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಮುದ್ರಾ ಯೋಜನೆಯಡಿ ವಿತರಿಸುತ್ತಿರುವ ಸಾಲವನ್ನು ಫಲಾನುಭವಿಗಳು ಸದ್ಭಳಕೆ ಮಾಡಿಕೊಳ್ಳುತ್ತಿದ್ದಾರೆಯೇ, ಹಾಗೂ ಸರಿಯಾಗಿ ಸಾಲ ಮರು ಪಾವತಿ ಆಗುತ್ತಿದಿಯೇ ಎಂದು ಪ್ರಶ್ನಿಸಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್‍ನ ವ್ಯವಸ್ಥಾಪಕರು ಉತ್ತರಿಸಿ, ನಮ್ಮ ಬ್ಯಾಂಕ್‍ನಿಂದ 36 ಸಾವಿರ ಜನರಿಗೆ ಮುದ್ರಾ ಯೋಜನೆಯಡಿ ಸಾಲ ನೀಡಲಾಗಿದೆ. ಶಿಸು ಯೋಜನೆಯಡಿ ನೀಡಲಾಗಿರುವ ಸಣ್ಣ ಪ್ರಮಾಣದ ಸಾಲ ಸರಿಯಾಗಿ ಮರುಪಾವತಿಯಗುತ್ತಿದೆ. ಆದರೆ ಕಿಶೋರ ವಿಭಾಗದಲ್ಲಿ ಸಾಲ ಮರುಪಾವತಿ ಸರಿಯಾಗಿ ಆಗುತ್ತಿಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದೀಪಾ ಜಗದೀಶ್, ಸಿ.ಇ.ಓ ಪದ್ಮಾ ಬಸವಂತಪ್ಪ, ಕೆನಾರ ಬ್ಯಾಂಕ್ ವ್ಯವಸ್ಥಾಪಕರಾದ ವಿ.ರವೀಂದ್ರ, ವಿಭಾಗಿಯ ಪ್ರಬಂಧಕರಾದ ಜಿ.ಜಿ. ದೊಡ್ಡಮನಿ, ಮತ್ತು ಎಲ್ಲಾ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದರು.
33