Connect with us

Dvgsuddi Kannada | online news portal | Kannada news online

ಮಾಯಕೊಂಡ ಹೊಸ ತಾಲ್ಲೂಕು ರಚನೆಗೆ ಪರ-ವಿರೋಧ ಚರ್ಚೆ, ಮುಖಂಡರ ನಡುವೆ ಮಾತಿನ ಚಕಮಕಿ; ಎರಡ್ಮೂರು ದಿನದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆ: ಡಿಸಿ

ದಾವಣಗೆರೆ

ಮಾಯಕೊಂಡ ಹೊಸ ತಾಲ್ಲೂಕು ರಚನೆಗೆ ಪರ-ವಿರೋಧ ಚರ್ಚೆ, ಮುಖಂಡರ ನಡುವೆ ಮಾತಿನ ಚಕಮಕಿ; ಎರಡ್ಮೂರು ದಿನದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆ: ಡಿಸಿ

ಡಿವಿಜಿ ಸುದ್ದಿ, ದಾವಣಗೆರೆ:  ಮಾಯಕೊಂಡ ಹೊಸ ತಾಲ್ಲೂಕು ರಚನೆ ಕುರಿತು ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದ್ದು, ಜನರಿಂದ ಸಂಗ್ರಹಿಸಲಾದ ವಾಸ್ತವಾಂಶವನ್ನು ಎರಡ್ಮೂರು ದಿನದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಮಾಯಕೊಂಡ ಹೊಸ ತಾಲ್ಲೂಕು ರಚನೆ ಕುರಿತು ಸಾರ್ವಜನಿಕರ, ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹ  ಸಭೆ ನಂತರ ಮಾತನಾಡಿದರು. ಮಾಯಕೊಂಡ ಹೊಸ ತಾಲ್ಲೂಕು ರಚನೆ ಕುರಿತು ನೀವು ನೀಡಿರುವ ಅಭಿಪ್ರಾಯಗಳನ್ನು ಎರಡ್ಮೂರು ದಿನದಲ್ಲಿ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ಅಂತಿಮವಾಗಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದರು.
ಸಾಕಷ್ಟು ವರ್ಷಗಳಿಂದ ಮಾಯಕೊಂಡವನ್ನು ತಾಲ್ಲೂಕನ್ನಾಗಿ ರಚಿಸುವ ಕುರಿತು ಹೋರಾಟ ನಡೆದಿದೆ.  ಮಾಯಕೊಂಡವನ್ನು ಹೊಸ ತಾಲ್ಲೂಕನ್ನಾಗಿ ರಚಿಸಲು ಸರ್ಕಾರಕ್ಕೆ ಸಲ್ಲಿಸಿರುವ ಮನವಿಯನ್ನು ಆಧರಿಸಿ, ದಾವಣಗೆರೆ ತಾಲ್ಲೂಕು ತಹಶೀಲ್ದಾರರು ಈಗಾಗಲೇ ಸಭೆ ನಡೆಸಿ ಇಲ್ಲಿ ವ್ಯಕ್ತವಾದ ಭಿನ್ನಾಭಿಪ್ರಾಯಗಳ ವರದಿಯನ್ನು ನೀಡಿದ್ದಾರೆ. ಕೆಲವರು ಹೊಸ ತಾಲ್ಲೂಕು ರಚನೆ ಬೇಕೆಂದರೆ, ಮತ್ತೆ ಕೆಲವರು ತಮ್ಮ ಗ್ರಾಮಗಳನ್ನು ಹೊಸ ತಾಲ್ಲೂಕಿಗೆ ಸೇರ್ಪಡೆ ಮಾಡುವುದು ಬೇಡವೆಂಬ ಅಭಿಪ್ರಾಯ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ  ಮುಕ್ತವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಈ ಸಭೆ ಕರೆಯಲಾಗಿದೆ ಎಂದರು.

ಮಾಯಕೊಂಡ ತಾಲ್ಲೂಕು ಹೋರಾಟ ಸಮಿತಿಯ ಗೌರವಾಧ್ಯಕ್ಷ ಎಂ.ಎಸ್.ಕೆ ಶಾಸ್ತ್ರಿ ಮಾತನಾಡಿ, ಎಸ್.ಎಂ.ಕೃಷ್ಣರವರು ಮುಖ್ಯಮಂತ್ರಿಯಾದ ಅವಧಿಯಿಂದ ಮಾಯಕೊಂಡ ಹೊಸ ತಾಲ್ಲೂಕು ರಚನೆ ಪ್ರಸ್ತಾಪ ಸಲ್ಲಿಸಲಾಗುತ್ತಿದೆ. ಎಲ್ಲ ಮೂಲಭೂತ ಸೌಕರ್ಯಗಳು, ಐತಿಹಾಸಿಕ ಹಿನ್ನೆಲೆ ಹೊಂದಿರುವ ಮಾಯಕೊಂಡದಲ್ಲಿ ಬ್ರಿಟಿಷ್ ರಾಣಿ ಎಲಿಜಬೆತ್ ವಿರುದ್ಧ ಹೋರಾಡಿದ ಸುಮಾರು 180 ಜನ ಹುತಾತ್ಮರಿದ್ದಾರೆ.

ಹಲವಾರು ವರ್ಷಗಳಿಂದ ಹೊಸ ತಾಲ್ಲೂಕು ರಚನೆ ಹೋರಾಟ ನಿರಂತರವಾಗಿ ನಡೆಯುತ್ತಾ ಬಂದಿದ್ದು ಜಗದೀಶ್ ಶೆಟ್ಟರ್‍ರವರು ತಮ್ಮ ಅವಧಿಯಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳನ್ನು ತಾಲ್ಲೂಕನ್ನಾಗಿ ಮಾಡಲಾಗುವುದು ಎಂದಿದ್ದರು. ಅದೂ ಕೈಗೂಡಲಿಲ್ಲ, ಪ್ರಸಕ್ತ ಮುಖ್ಯಮಂತ್ರಿ ಯಡಿಯೂರಪ್ಪನವರ ಅವಧಿಯಲ್ಲಿ ಹೊಸ ತಾಲ್ಲೂಕು ರಚನೆಯಾಗುತ್ತದೆಂಬ ಭರವಸೆ ಇದ್ದು, ಹೊಸ ತಾಲ್ಲೂಕು ರಚನೆ ಆಗಲೇಬೇಕೆಂಬುದು ತಮ್ಮ ಹಕ್ಕೊತ್ತಾಯ ಮಾಡಿದರು.

ಚನ್ನಗಿರಿ ತಾಲ್ಲೂಕಿನ ಹೊಬಳಿಗಳು ಹೊಸ ತಾಲ್ಲೂಕಿಗೆ ಸೇರ್ಪಡೆಗೊಳ್ಳುವುದಿಲ್ಲವೆಂದರೆ ಬೇಡ ಎನ್ನುತ್ತಿದ್ದಂತೆ ಮುಖಂಡರಲ್ಲೇ ಮಾತಿನ ಚಕಮಕಿ ಆರಂಭವಾಯಿತು. ಜಿಲ್ಲಾಧಿಕಾರಿಗಳು ಎಲ್ಲರನ್ನು ಶಾಂತಗೊಳಿಸಿ ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರಿಗೂ ಅವಕಾಶ ಕಲ್ಪಿಸಿದರು.

ಅತ್ತಿಗೆರೆ ಅನಿಲ್ ಕುಮಾರ್, ತ್ಯಾವಣಿಗೆ ಕೃಷ್ಣಕುಮಾರ್, ಚನ್ನಗಿರಿ ತಾ.ಪಂ ಸದಸ್ಯ ಎ.ಸಿ.ಪಾಟಿಲ್, ತ್ಯಾವಣಗಿಯ ಗೋವಿಂದಸ್ವಾಮಿ ತಮ್ಮ ಗ್ರಾ.ಪಂ ಗಳನ್ನು ಹೊಸ ತಾಲ್ಲೂಕಿಗೆ ಸೇರ್ಪಡೆಗೊಳಿಸುವುದು ಬೇಡವೆಂದರು. ಚಿನ್ನಸಮುದ್ರದ ಶೇಖರ್‍ನಾಯ್ಕ, ಆನಗೋಡು, ಅಣಜಿಯನ್ನು ಹೊಸ ತಾಲ್ಲೂಕಿಗೆ ಸೇರ್ಪಡೆಗೊಳಿಸುವುದು ಬೇಡ. ಹಾಗೇನಾದರೂ ಸೇರಿಸಿದರೆ ಹಿಂದೆ ಜರುಗಿದ ಗೋಲಿಬಾರ್ ಪ್ರಕರಣ ಮರುಕಳಿಸುತ್ತದೆ ಎಂದಾಗ ಸಾರ್ವಜನಿಕರು ಮತ್ತೆ ಗಲಾಟೆ ಆರಂಭಿಸಿದರು.

ಯಾರು ಏನು ಮಾತನಾಡಿದರು..?

ಹೊಸ ತಾಲ್ಲೂಕು ರಚನೆಗಾಗಿ ಯಾವುದೇ ರೀತಿಯ ಭೂಸ್ವಾಧೀನ ಪ್ರಕ್ರಿಯೆ ಬೇಡ. ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ಹೋಬಳಿ  ಹೊಸ ತಾಲ್ಲೂಕಿಗೆ ಸೇರ್ಪಡೆಗೊಳಿಸುವುದು ಬೇಡ. ಚನ್ನಗಿರಿಯಲ್ಲಿ ಇನ್ನೊಂದು ತಾಲ್ಲೂಕಿನ ಪ್ರಸ್ತಾಪ ಇದ್ದರೆ ತ್ಯಾವಣಗಿ ತಾಲ್ಲೂಕು ಕೇಂದ್ರ ಮಾಡಿ.

-ತೇಜಸ್ವಿ ಪಟೇಲ್, ಜಿ.ಪಂ ಸದಸ್ಯ, ಕಾರಿಗನೂರು ಕ್ಷೇತ್ರ

ಮಾಯಕೊಂಡ ಹೊಸ ತಾಲ್ಲೂಕು ರಚನೆ ಬಗ್ಗೆ ತಮ್ಮ ಆಕ್ಷೇಪ ಇಲ್ಲ. ಆದರೆ ತಮ್ಮ ಕ್ಷೇತ್ರದ ಗ್ರಾ.ಪಂಗಳನ್ನು ಈ ತಾಲ್ಲೂಕಿಗೆ ಸೇರ್ಪಡೆಗೊಳಿಸುವುದು ಬೇಡ. ಅನಾನುಕೂಲವಾಗುತ್ತದೆ ಎಮದರು.

-ಓಬಳಪ್ಪ, ಜಿ.ಪಂ ಸದಸ್ಯ, ಲೋಕಿಕೆರೆ ಕ್ಷೇತ್ರ

ರೈಲ್ವೇ ನಿಲ್ದಾಣಗಳು, ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿರುವ ಮಾಯಕೊಂಡವನ್ನು ಹೊಸ ತಾಲ್ಲೂಕಾಗಿ ರಚಿಸಬೇಕು.ಯಾರಿಗೂ ತೊಂದರೆ ಆಗದಂತೆ ಮಾಯಕೊಂಡಕ್ಕೆ ಹತ್ತಿರವಿರುವ ಹೋಬಳಿಗಳನ್ನು ಸೇರಿಸಿಕೊಂಡು ತಾಲ್ಲೂಕು ರಚನೆಗೆ ಶಿಫಾರಸು ಮಾಡಬೇಕು.

-ಮುರುಗೇಂದ್ರಪ್ಪ ಹದ್ನೆ, ಅಧ್ಯಕ್ಷ ,  ತಾಲ್ಲೂಕು ಹೋರಾಟ ಸಮಿತಿ

ಮಾಯಕೊಂಡ ತಾಲ್ಲೂಕಿಗೆ ಗ್ರಾಮಗಳು ಸೇರ್ಪಡೆಗೊಳ್ಳಲು ಒತ್ತಾಯವಿಲ್ಲ. 30 ವರ್ಷಗಳಿಂದ ಹೊಸ ತಾಲ್ಲೂಕು ರಚನೆ ಹೋರಾಟ ನಡೆದಿದೆ. ಗ್ರಾಮೀಣ ಭಾಗಕ್ಕೊಂದು ತಾಲ್ಲೂಕು ಬೇಕಿದ್ದು ಎಲ್ಲರೂ ಸಹಕರಿಸಬೇಕು

-ನಟರಾಜ್ , ಜಿ.ಪಂ.ಸದಸ್ಯ,  ಮಾಯಕೊಂಡ ಕ್ಷೇತ್ರ

ತಾಲ್ಲೂಕು ರಚನೆ ವೇಳೆ ಭಾವನಾತ್ಮಕವಾಗಿ ಯೋಚಿಸುವುದಕ್ಕಿಂತ ವೈಚಾರಿಕವಾಗಿ ಯೋಚಿಸಿ, ತಾಂತ್ರಿಕ ದೋಷಗಳ ಬಗ್ಗೆ ಗಮನ ಹರಿಸಬೇಕು. ತಮ್ಮ ಬಾಡ ಕ್ಷೇತ್ರವನ್ನು ಹೊಸ ತಾಲ್ಲೂಕಿಗೆ ಸೇರಿಸುವುದರಿಂದ ಓಡಾಟ ಇತರೆ ತೊಂದರೆಯಾಗುವುದರಿಂದ ಸೇರಿಸುವುದು ಬೇಡ. ಆದರೆ ಮಾಯಕೊಂಡ ತಾಲ್ಲೂಕು ರಚನೆ ಬಗ್ಗೆ ವಿರೋಧವಿಲ್ಲವೆಂದರು

-ಶೈಲಜಾ ಬಸವರಾಜ್ , ಮಾಜಿ ಅಧ್ಯಕ್ಷೆ,  ಜಿ.ಪಂ ದಾವಣಗೆರೆ

ಒಂದು ತಾಲ್ಲೂಕು ರಚಿಸಲು ಇಂದು ರೂ.600 ಕೋಟಿ ಹಣ ಬೇಕು. ಹಿಂದೆ ಜಿಲ್ಲೆ ರಚನೆ ವೇಳೆ ಸಹ ಇಷ್ಟ ಜನ ಸೇರಿರಲಿಲ್ಲ. ಪ್ರಸ್ತುತ ದಾವಣಗೆರೆ ನಗರ ಮತ್ತು ಗ್ರಾಮೀಣ ಎಂಬ ಎರಡು ತಾಲ್ಲೂಕಾಗಬೇಕು ಹಾಗೂ ಚನ್ನಗಿರಿಯಲ್ಲಿ ಇನ್ನೊಂದು ತಾಲ್ಲೂಕಾಗಬೇಕು.

– ಬಲ್ಲೂರು ರವಿಕುಮಾರ್, ರೈತ ಮುಖಂಡ

ಹಿಂದೆ ಎಲ್ಲ ಕೆಲಸಕ್ಕೆ ಚಿತ್ರದುರ್ಗಕ್ಕೆ ಅಲೆದಾಡಬೇಕಿತ್ತು. ಜೆ.ಹೆಚ್.ಪಟೇಲ್‍ರವರ ಇಚ್ಚಾಶಕ್ತಿಯಿಂದ ದಾವಣಗೆರೆ ಜಿಲ್ಲೆ ರಚನೆಯಾಗಿ ರೈತರು ಸೇರಿದಂತೆ ಎಲ್ಲರಿಗೂ ಅನುಕೂಲವಾಯಿತು.  ಯಾರ ಭಾವನೆಗಳಿಗೆ ಧಕ್ಕೆ ಬಾರದಂತೆ ತಾಲ್ಲೂಕು ರಚನೆಯಾಗಬೇಕು.

– ಡಾ.ವೈರಾಮಪ್ಪ ,ಜಿ.ಪಂ, ಮಾಜಿ ಉಪಾಧ್ಯಕ್ಷ

ಮಾಯಕೊಂಡ ಹೊಸ ತಾಲ್ಲೂಕು ರಚನೆಗೆ ಸಂಬಂಧಿಸಿದಂತೆ ಚನ್ನಗಿರಿ ತಾಲ್ಲೂಕು ಬಸವಾಪಟ್ಟಣ ಹೋಬಳಿ, ತ್ಯಾವಣಿಗೆ ಹೋಬಳಿ , ದಾವಣಗೆರೆ ತಾಲ್ಲೂಕಿನ ಲೋಕಿಕೆರೆ ಹೋಬಳಿ  ವ್ಯಾಪ್ತಿಯ  ಬಾಡ, ಆಲೂರು, ಆನಗೋಡು, ಕುರ್ಕಿ, ಹುಲಿಕಟ್ಟೆ, ನರಗನಹಳ್ಳಿ, ಐಗೂರು, ದಾಗಿನಕಟ್ಟೆ ಸೇರಿದಂತೆ ಒಟ್ಟು 33 ಗ್ರಾ,ಪಂಗಳು ಭೌಗೋಳಿಕ, ತಾಂತ್ರಿಕ ಸಮಸ್ಯೆಗಳಿಂದ  ಮಾಯಕೊಂಡ ತಾಲ್ಲೂಕಿಗೆ ಸೇರ್ಪಡೆಗೊಳಿಸುವುದು ಬೇಡ. ಆದರೆ ಮಾಯಕೊಂಡ ಹೊಸ ತಾಲ್ಲೂಕನ್ನಾಗಿ ರಚಿಸಲು ತಮ್ಮ ಅಭ್ಯಂತರವಿಲ್ಲ  ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ.ಜಿ. ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ಸಂತೋಷ್‍ಕುಮಾರ್, ಚನ್ನಗಿರಿ ತಾಲ್ಲೂಕು ತಹಶೀಲ್ದಾರ್ ನಾಗರಾಜ್, ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಖಂಡರು, ಸಾರ್ವಜನಿಕರು, ಅಧಿಕಾರಿಗಳು ಹಾಜರಿದ್ದರು.

ಡಿವಿಜಿ ಸುದ್ದಿ, ವಾಟ್ಸ್ ಆಪ್ :7483892205  

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top