ಡಿವಿಜಿ ಸುದ್ದಿ, ದಾವಣಗೆರೆ: ರಾಜ್ಯ ಸರ್ಕಾರ ಮಹತ್ವಾಕಾಂಕ್ಷಿಯ ‘ಸಪ್ತಪದಿ’ ಯೋಜನೆಯ ಮೊದಲ ಹಂತದ ಸಾಮೂಹಿಕ ವಿವಾಹ ಕಾರ್ಯಕ್ರಮ ಮೇ.24 ರಂದು ಹೊನ್ನಾಳಿ ತಾಲ್ಲೂಕಿನ ಸುಂಕದಕಟ್ಟೆ ಗ್ರಾಮದ ಶ್ರೀ ಮಂಜುನಾಥ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ನಡೆಲಿದ್ದು, ವಧು-ವರನ ಮದುವೆ ಖರ್ಚಿಗೆ ಸರ್ಕಾರವೇ 55 ಸಾವಿರ ಪ್ರೋತ್ಸಾಹ ಧನ ನೀಡಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಪ್ರವರ್ಗ ‘ಎ’ ಶ್ರೇಣಿ ದೇವಾಲಯದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸುವಂತೆ ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸುಂಕದಕಟ್ಟೆ ಗ್ರಾಮದ ಶ್ರೀ ಮಂಜುನಾಥ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿವಾಹ ನೆರವೇರಿಸಲಾಗುವುದು. ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವರು ದೇವಾಲಯದ ಕಚೇರಿಗೆ ಬಂದು ಅರ್ಜಿ ಪಡೆದು, ದಾಖಲೆಗಳನ್ನು ನೀಡಿ ವಿವಾಹ ನಡೆಯುವ ದಿನಾಂಕಕ್ಕೆ 30 ದಿನಗಳ ಮುಂಚಿತವಾಗಿ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿಗಳಲ್ಲಿ ವಿವಾಹ ನೋಂದಣಿಯನ್ನು ಮಾಡಿಸಿಕೊಳ್ಳಬೇಕು ಎಂದರು.
- ಮೇ24 ಸಾಮೂಹಿಕ ವಿವಾಹ ದಿನ
- ಏಪ್ರಿಲ್ 24 ನೋಂದಾಯಿಸಿಕೊಳ್ಳಲು ಕೊನೆಯ ದಿನ
- ಏಪ್ರಿಲ್ 29 ದೇವಾಲಯದಲ್ಲಿ ಪಟ್ಟಿ ಪ್ರಕಟ
- ಮೇ.5 ವರಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ
- ಮೇ.9 ಅಂತಿಮ ವಧು-ವರರ ಅಂತಿಮ ಪಟ್ಟಿ
ಸರ್ಕಾರದ ನಿಯಮದಂತೆ ಗಂಡಿಗೆ ಕನಿಷ್ಟ 21 ವರ್ಷಗಳು ಮತ್ತು ಹೆಣ್ಣಿಗೆ ಕನಿಷ್ಟ 18 ವರ್ಷಗಳು ತುಂಬಿರಬೇಕು. ವಯಸ್ಸಿನ ಬಗ್ಗೆ ಸರ್ಕಾರದ ಅಧಿಕೃತ ದಾಖಲೆಗಳನ್ನು ಸಲ್ಲಿಸಬೇಕು. ವಿವಾಹ ನಡೆಯುವ ಸ್ಥಳದಲ್ಲಿ ವಿವಾಹ ನೋಂದಣಾಧಿಕಾರಿಗಳು ಮತ್ತು ಆಯಾ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದು ಕಡ್ಡಾಯವಾಗಿ ವಿವಾಹ ನೋಂದಣಿ ಮಾಡಿಸುವ ಬಗ್ಗೆ ಅಗತ್ಯ ಕ್ರಮ ವಹಿಸಬೇಕೆಂದರು.
ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವರನಿಗೆ ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ ರೂ.5000 ಪ್ರೋತ್ಸಾಹ ಧನವನ್ನು ವರನ ಖಾತೆಗೆ ಹಾಗೂ ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ ಮತ್ತು ಕಣಕಕ್ಕಾಗಿ ರೂ.10,000 ಗಳನ್ನು ನೇರವಾಗಿ ವಧುವಿನ ಉಳಿತಾಯ ಖಾತೆಗೆ ಜಮಾ ಮಾಡಲಾಗುವುದು. ಹಾಗೂ ವಧುವಿಗೆ ರೂ.40,000 ಮೊತ್ತದಲ್ಲಿ ಚಿನ್ನದ ತಾಳಿ ಮತ್ತು ಎರಡು ಚಿನ್ನದ ಗುಂಡುಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದರು.
ಸಾಮೂಹಿಕ ವಿವಾಹಕ್ಕೆ ವಧು-ವರರೊಂದಿಗೆ ಎಷ್ಟು ಜನ ಬಂಧುಗಳು ಆಗಮಿಸುತ್ತಾರೆ ಎಂಬ ಬಗ್ಗೆ ಮುಂಚಿತವಾಗಿ ಮಾಹಿತಿ ಪಡೆದು ಅವರುಗಳಿಗೆ ದೇವಾಲಯ ವತಿಯಿಂದ ಊಟೋಪಚರದ ವ್ಯವಸ್ಥೆ ಮಾಡಲಾಗುವುದು ಎಂದರು.