ಡಿವಿಜಿ ಸುದ್ದಿ, ದಾವಣಗೆರೆ: ಕಳೆದ16 ತಿಂಗಳಿಂದ ಬಾಕಿ ಶಿಷ್ಯವೇತ ನೀಡುವಂತೆ ಆಗ್ರಹಿಸಿ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಹಯೋಗದೊಂದಿಗೆ ನಿನ್ನೆಯಿಂದ ನಗರದ ಜಯದೇವ ವೃತ್ತದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಶಿಷ್ಯ ವೇತನ ನೀಡುವರೆಗೂ ಮುಷ್ಕರ ಕೈ ಬಿಡುವುದಿಲ್ಲ ಎಂದು ವೈದ್ಯಕೀಯ ವಿದ್ಯಾರ್ಥಿಗಳು ಪಟ್ಟು ಹಿಡಿದ್ದಾರೆ.
ಇಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ ಪಿ ಹನುಮಂತರಾಯ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು. ಪ್ರತಿಭಟನೆ ಕೈ ಬಿಡುವಂತೆ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು. ಆದರೆ, ವಿದ್ಯಾರ್ಥಿಗಳು ಸರ್ಕಾರದದಿಂದ ಸ್ಪಷ್ಟ ಆದೇಶ ಬರುವ ವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದರು.
ಸರ್ಕಾರಿ ಖೋಟಾದಡಿ ಪ್ರವೇಶ ಪಡೆದಿರುವ 230 ವೈದ್ಯಕೀಯ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಕಳೆದ 16 ತಿಂಗಳಿಂದ ಶಿಷ್ಯ ವೇತನ ನಿಲ್ಲಿಸಿದೆ. ಈ ಬಗ್ಗೆ 16 ತಿಂಗಳಿಂದ ಸಿಎಂ, ಡಿಸಿಎಂ, ವೈದ್ಯಕೀಯ ಶಿಕ್ಷಣ ಸಚಿವರು ಸೇರಿದಂತೆ ಎಲ್ಲರಿಗೂ ಮನವಿ ಸಲ್ಲಿಸಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಕಾಲೇಜು ಆಡಳಿತ ಮಂಡಳಿ ಶಿಷ್ಯ ವೇತನ ನೀಡಬೇಕು ಎಂದು ಹೇಳುತ್ತಿದೆ. ಇತ್ತ ಕಾಲೇಜು ಆಡಳಿತ ಮಂಡಳಿ, ಸರ್ಕಾರವೇ ಶಿಷ್ಯ ವೇತನ ನೀಡಬೇಕು ಎಂದು ಹೇಳುತ್ತಿದೆ. ಈ ಇಬ್ಬರ ಜಗಳದಲ್ಲಿ ವಿದ್ಯಾರ್ಥಿಗಳು ಶಿಷ್ಯ ವೇತನ ಸಿಗದಂತಾಗಿದೆ. ಇದರಿಂದ ಕಾಲೇಜಿನ ಶುಲ್ಕ ಹಾಗೂ ಶೈಕ್ಷಣಿಕ ವೆಚ್ಚ ನಿಭಾಯಿಸಲು ಸಾಧ್ಯವಗುತ್ತಿಲ್ಲ ಎಂದು ಪಿಜಿ ವಿದ್ಯಾರ್ಥಿ ಡಾ. ಹರೀಶ್ ಬೇಸರ ವ್ಯಕ್ತಪಡಿಸಿದರು.

ಪ್ರವೇಶ ಪಡೆಯುವ ಮುನ್ನವೇ ಸರ್ಕಾರ ಈ ಬಗ್ಗೆ ಸ್ಪಷ್ಟಪಡಿಸಿದ್ದರೆ ನಾವು ಈ ಕಾಲೇಜಿನಲ್ಲಿ ಪ್ರವೇಶವನ್ನೇ ಪಡೆಯುತ್ತಿರಲಿಲ್ಲ. ನಮ್ಮ ಸೇವೆಯನ್ನು ಬಳಸಿಕೊಳ್ಳುತ್ತಿರುವ ಸರ್ಕಾರ ಶಿಷ್ಯ ವೇತನ ನೀಡುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದರು.
16 ತಿಂಗಳಿಂದ ಯಾವುದೇ ವೇತನ ಇಲ್ಲದೆ ಕೆಲಸ ಮಾಡಿದ್ದೇವೆ. ಇದರ ಮಧ್ಯೆ ಕೊರೊನಾ ಬಂದಿದ್ದರಿಂದ ಕೋವಿಡ್ ಆಸ್ಪತ್ರೆಗಳಲ್ಲಿ ಕೊರೊನಾ ವಾರಿಯರ್‌ಗಳಾಗಿ ಕೆಲಸ ಮಾಡುತ್ತಿದ್ದೇವೆ. ಕೆಲವು ಜೂನಿಯರ್ ಡಾಕ್ಟರ್‌ಗಳಿಗೂ ಕೊರೊನಾ ಸೋಂಕು ತಗುಲಿದೆ. ಇಂತಹ ಸಂಕಷ್ಟ ಎದುರಿಸಿದರೂ ಸರ್ಕಾರ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ನಮ್ಮನ್ನು ಜೀತದಾಳುಗಳ ರೀತಿ ನೋಡುತ್ತಿದೆ. ತುರ್ತು ಸೇವೆಗೆ ತೊಂದರೆಯಾಗದಂತೆ ನಾವು ಈಗ ಪ್ರತಿಭಟನೆ ನಡೆಸುತ್ತಿದ್ದು, ನಮ್ಮ ಬೇಡಿಕೆ ಈಡೇರಿಸದಿದ್ದರೆ, ಮುಂದಿನ ಅನಾಹುತಗಳಿಗೆ ಸರ್ಕಾರವೇ ಕಾರಣವಾಗುತ್ತದೆ ಎಂದರು.
ಡಾ.ರಾಹುಲ್, ಡಾ.ಮೇಘನಾ, ಡಾ. ನಿಧಿ ಸೇರಿದಂತೆ ನೂರಾರು ವೈದ್ಯ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.



