ಡಿವಿಜಿ ಸುದ್ದಿ, ದಾವಣಗೆರೆ: 16 ತಿಂಗಳ ಶಿಷ್ಯ ವೇತನಕ್ಕೆ ಆಗ್ರಹಿಸಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ 11 ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ವೈದ್ಯಕೀಯ ವಿದ್ಯಾರ್ಥಿಗಳು ತಟ್ಟೆ ಬಾರಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ನಗರದ ಜಯದೇವ ವೃತ್ತದಲ್ಲಿ ತಮ್ಮ ಶಿಷ್ಯ ವೇತನಕ್ಕೆ ಆಗ್ರಹಿಸಿ 11 ದಿನಗಳಿಂದ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ವೈದ್ಯ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡುವಲ್ಲಿ ಸರ್ಕಾರ ಮತ್ತು ಜೆಜೆಎಂ ಕಾಲೇಜಿನ ಆಡಳಿತ ಮಂಡಳಿ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಈ ಇಬ್ಬರ ನಡುವಿನ ತಿಕ್ಕಾಟದಲ್ಲಿ ವೈದ್ಯ ವಿದ್ಯಾರ್ಥಿಗಳು ಪರಿದಾಟ ನಡೆಸುತ್ತಿದ್ದಾರೆ.

ಜೆಜೆಎಂ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಅವರು ನಮ್ಮಿಂದ ಶಿಷ್ಯ ವೇತನ ನೀಡಲು ಸಾಧ್ಯವಿಲ್ಲ. ಸರ್ಕಾರ ಶಿಷ್ಯ ವೇತನ ನೀಡುವವರೆಗೂ ಹೋರಾಟ ಮಾಡಿ ಎಂದು ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಸರ್ಕಾರ ಕಡೆ ಮುಖ ಮಾಡಿ ಹೋರಾಟ ನಡೆಸುತ್ತಿದ್ದಾರೆ.

ರಾಜ್ಯದಲ್ಲಿ ಯಾವುದೇ ವೈದ್ಯಕೀಯ ಕಾಲೇಜಿಗೆ ಸರ್ಕಾರ ಶಿಷ್ಯ ವೇತನ ನೀಡುತ್ತಿಲ್ಲ. ನಿಮ್ಮ ಕಾಲೇಜಿಗೆ ಮಾತ್ರ ಶಿಷ್ಯ ವೇತನ ನೀಡಿದರೆ, ಬೇರೆ ಕಾಲೇಜಿನವರು ಬರುವ ಸಾಧ್ಯತೆ ಇದೆ. ಹೀಗಾಗಿ ಆಡಳಿತ ಮಂಡಳಿಯೇ ಶಿಷ್ಯ ವೇತನ ಭರಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಕಳೆದ11 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಸರ್ಕಾರ ನಮ್ಮ 16 ತಿಂಗಳ ಶಿಷ್ಯವೇತನ ಬಾಕಿ ವೇತನ ಕೊಡುವ ವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.



