ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲ್ಲೂಕಿನ ಉಚ್ಚoಗಿದುರ್ಗದ ಅಣಜಿಗೆರೆ ಮಾರ್ಗದ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿ ಬಿದ್ದಿದ್ದು, ಭಾರೀ ಮಳೆಯ ಪರಿಣಾಮ ರಸ್ತೆ ಗದ್ದೆಯಂತಾಗಿದೆ.
ರಸ್ತೆಯಲ್ಲಿ ದಿನ ನಿತ್ಯ ಸಾವಿರಾರು ಪ್ರಯಾಣಿಕರು ಓಡಾಡುತ್ತಿದ್ದು, ತುಂಬಾ ತೊಂದರೆಯಾಗುತ್ತಿದೆ. ಈ ಬಗ್ಗೆ ಅನೇಕ ಬಾರಿ ದೂರು ನೀಡಿದ್ದರೂ, ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ.
ಈ ಗುಂಡಿಗಳಲ್ಲಿ ಅನೇಕರು ಬಿದ್ದು ಕೈ ಕಾಲು ಮುರಿದು ಕೊಂಡಿದ್ದಾರೆ ಅಲ್ಲದೆ ಪ್ರತಿ ಗುರುವಾರ ಗ್ರಾಮದಲ್ಲಿ ಸಂತೆ ನಡೆಯುತ್ತದೆ. ಸಂತೆಗೆ ಸುತ್ತ ಮುತ್ತಲಿನ ಸಾವಿರಾರು ಜನರು ಮಹಿಳೆಯರು, ವೃದ್ದರು, ಮಕ್ಕಳು ನಡೆದುಕೊಂಡು ಬರುತ್ತಾರೆ. ದಾರಿಯಲ್ಲಿನ ಗುಂಡಿಗಳು ಕಾಣದೆ ಬಿದ್ದು ಕೈ-ಕಾಲುಗಳನ್ನು ಮುರಿದುಕೊಂಡಿದ್ದಾರೆ.
ಈ ಕುರಿತು ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಲೋಕೋಪಯೋಗಿ ಇಲಾಖೆಗೆ ಪತ್ರವನ್ನು ಬರೆದು ಹಲವು ದಿನಗಳಾದರೂ ಗುಂಡಿ ಮುಚ್ಚಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಹರಪನಹಳ್ಳಿ ಕಾರ್ಯಪಾಲಕ ಅಭಿಯಂತರ ಲಿಂಗಪ್ಪ, ಒಂದು ವಾರದೊಳಗೆ ಗುಂಡಿಗಳನ್ನು ಮುಚ್ಚುವ ಭರವಸೆ ನೀಡಿದ್ದಾರೆ.