ಡಿವಿಜಿ ಸುದ್ದಿ, ದಾವಣಗೆರೆ : ಜಿಲ್ಲೆಯ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದರೆ ಜು.10ರೊಳಗಿ ಹಿಂತಿರುಗಿಸಿ. ಜುಲೈ 10 ನಂತರ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದರೆ ಬೀಳಲಿದೆ ಭಾರೀ ದಂಡ..
ಜಿಲ್ಲೆಯಲ್ಲಿ ಕೆಲವು ಸರ್ಕಾರಿ, ಸರ್ಕಾರದ ನಿಗಮ, ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಸಂಸ್ಥೆಯ ಅಧಿಕಾರಿ, ನೌಕರರು ಮತ್ತು ಅವರ ಅವಲಂಬಿತ ಕುಟುಂಬ ವರ್ಗದವರು ಸ ಬಡತನ ರೇಖೆಗಿಂತ ಕೆಳಗಿರುವ ಬಡವರಿಗೆ ವಿತರಿಸುವ ಬಿಪಿಎಲ್ ಪಡಿತರ ಚೀಟಿಯನ್ನು ಪಡೆದುಕೊಂಡು ಸರ್ಕಾರದಿಂದ ವಿತರಿಸುವ ಪಡಿತರ ಮತ್ತು ಇನ್ನಿತರೆ ಸರ್ಕಾರಿ ಸೇವೆಗಳನ್ನು ಪಡೆದುಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.

ಇದು ಒಬ್ಬ ಸರ್ಕಾರಿ ನೌಕರನಿಗೆ ತರವಲ್ಲದ ವರ್ತನೆಯಾಗಿರುತ್ತದೆ. ಬಿಪಿಎಲ್ ಪಡಿತರ ಚೀಟಿಗಳನ್ನು ಬಡತನ ರೇಖೆಗಿಂತ ಕೆಳಗಿರುವ ಬಡವರಿಗೆ ನೀಡುವ ಸೌಲಭ್ಯವಾಗಿದ್ದು, ಇದನ್ನು ಸರ್ಕಾರಿ ನೌಕರನಾಗಿ ಉಪಯೋಗಿಸಿಕೊಳ್ಳುವುದು ಅಕ್ಷಮ್ಯ ಅಪರಾಧ. ಒಬ್ಬ ಸರ್ಕಾರಿ ನೌಕರ ಮತ್ತು ಆತನ ಅವಲಂಬಿತ ಕುಟುಂಬ ಸದಸ್ಯರು ಈಗಾಗಲೇ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದರೆ ಜು.10 ರೊಳಗಾಗಿ ಅದನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗೆ ಕೊಡಲೇ ಹಿಂತಿರುಗಿಸಿ ರದ್ದುಪಡಿಸಿಕೊಳ್ಳಬೇಕು.
ಒಂದು ವೇಳೆ ಜು.10ರ ನಂತರವೂ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ ಬಗ್ಗೆ ಮಾಹಿತಿ, ದೂರುಗಳು ಸ್ವೀಕೃತವಾದರೆ ಅಂತಹವರ ವಿರುದ್ದ ಶಿಸ್ತು ಕ್ರಮ ಮತ್ತು ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಮತ್ತು ಅವರಿಂದ ಸರ್ಕಾರಕ್ಕೆ ಉಂಟಾಗಿರುವ ನಷ್ಟವನ್ನು ವಸೂಲು ಮಾಡಲು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.



