ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಬಿತ್ತನೆ ಬೀಜ ರಸಗೊಬ್ಬರಗಳ ಪೂರೈಕೆಯಲ್ಲಿ ಕೊರತೆ ಆಗದಂತೆ ನೋಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ರೈತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ಜೊತೆಗೆ ತೋಟಗಾರಿಕೆ ಹಾಗೂ ಕೃಷಿ ಬೆಳಗಳಿಗೆ ಉತ್ತಮ ರೀತಿಯ ಬೆಂಬಲ ಬೆಲೆ ನಿಗದಿಪಡಿಸಬೇಕು. ರೈತರ ಬೆಳೆ ಹಾನಿಗಳಿಗೆ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರೈತರ ಸಂಕಷ್ಟದಲ್ಲಿ ಜಿಲ್ಲಾಡಳಿತ ನಿಮ್ಮೊಂದಿಗಿದ್ದು, ಕಾಲ ಕಾಲಕ್ಕೆ ನಿಮ್ಮೆಲ್ಲರ ಸಲಹೆ ಸೂಚನೆ ತೆಗೆದುಕೊಂಡು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತೇವೆ. ನೀವು ಕೂಡ ನಮ್ಮ ಕೆಲಸದ ಅಂಗವಾಗಿದ್ದೀರಿ. ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಲು ನಿಮ್ಮ ಸಹಕಾರ ಬೇಕು ಎಂದರು.
ರೈತ ಮುಖಂಡ ಬಲ್ಲೂರು ರವಿಕುಮಾರ್ ಮಾತನಾಡಿ, ಬ್ಯಾಂಕ್ ಸಾಲಕ್ಕೆ ಎನ್.ಒ.ಸಿ ಕೇಳುತ್ತಿದ್ದಾರೆ. ಆದರೆ ರಿಸರ್ವ್ ಬ್ಯಾಂಕ್ ಎನ್.ಒ.ಸಿ ಅಗತ್ಯವಿಲ್ಲ ಎಂದರು. ಇದರಕ್ಕೆ ಪ್ರತಿಕ್ರಿಯಿಸಿದ ಲೀಡ್ ಬ್ಯಾಂಕ್ ಮ್ಯಾನೇಜರ್ , ಯಾವ ಬ್ಯಾಂಕಿನಲ್ಲೂ ಸಹ ಎನ್.ಒ.ಸಿ ಕೇಳುತ್ತಿಲ್ಲ. ಆದರೆ ಕೆಲವು ನಿರ್ದಿಷ್ಟ ಕಾರಣಗಳಿಗಷ್ಟೇ ಎನ್.ಒ.ಸಿ ಬೇಕಾಗಿದೆ. ಈ ಕುರಿತು ಲೀಡ್ ಬ್ಯಾಂಕ್‍ಗಳಿಗೆ ಮಾರ್ಗದರ್ಶನ ಮಾಡಲಾಗುವುದು. ಕೆಲವೊಮ್ಮೆ ಆರ್.ಟಿ.ಸಿ ಯಲ್ಲಿ ತಪ್ಪುಗಳಿದ್ದರೆ ಹೀಗೆ ಆಗುತ್ತದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಎನ್.ಒ.ಸಿ ಬಗ್ಗೆ ಪ್ರಚಾರ ಮಾಡಬೇಕು. ಯಾವ ಬ್ಯಾಂಕ್‍ನಲ್ಲೂ ರೈತರ ಸಾಲಗಳಿಗೆ ಎನ್.ಒ.ಸಿ ಅವಶ್ಯಕತೆಯಿಲ್ಲ ಎಂಬುದರ ಬಗ್ಗೆ ತಿಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.



