ಡಿವಿಜಿ ಸುದ್ದಿ, ದಾವಣಗೆರೆ: ನಗರದಲ್ಲಿ ಫೆ.29 ರಿಂದ ಮಾ.20 ರವರೆಗೆ ನಗರದಲ್ಲಿ ನಡೆಯಲಿರುವ ನಗರದೇವತೆ ಶ್ರೀದುರ್ಗಾಂಬಿಕಾದೇವಿ, ವಿನೋಬನಗರದ ಶ್ರೀಚೌಡೇಶ್ವರಿದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ನೀಡುವುದನ್ನು ನಿಷೇಧಿಸಲಾಗಿದೆ.
ಸಾರ್ವಜನಿಕ ಹಿತದೃಷ್ಠಿಯಿಂದಾಗಿ ಪರಿಸರ ನೈರ್ಮಲ್ಯ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಫೆ.29 ರಿಂದ ಮಾ.23 ರವರೆಗೆ ಪ್ರಾಣಿಬಲಿ ನೀಡುವುದನ್ನು ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಹತ್ತಿರ ಅಥವಾ ಜಾತ್ರಾ ಆವರಣದ ಪ್ರದೇಶದೊಳಗೆ ಭಕ್ತಾಧಿಗಳು, ಸಾರ್ವಜನಿಕರು ದೇವರ ಹೆಸರಿನಲ್ಲಿ ಕುರಿ, ಕೋಳಿ, ಆಡು ಇತ್ಯಾದಿ ಪ್ರಾಣಿಗಳನ್ನು ತೆಗೆದುಕೊಂಡು ಬರುವುದನ್ನು ಮತ್ತು ಮಾರಕಾಸ್ತ್ರಾಗಳನ್ನು ತರುವುದನ್ನು ನಿಷೇಧಿಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶಿಸಿದ್ದಾರೆ.
ಪ್ರಾಣಿಬಲಿ ಕೊಡುವ ಪದ್ದತಿಯು ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ ಪ್ರಕಾರ ಅಪರಾಧ ಹಾಗೂ ಶಿಕ್ಷಾರ್ಹವಾಗಿದೆ. ಈ ಪದ್ದತಿಯು ಅತ್ಯಂತ ಕ್ರೂರ ಹಾಗೂ ಅವೈಜ್ಞಾನಿಕವಾಗಿದ್ದು ಸಾಂಕ್ರಾಮಿಕ ರೋಗಗಳು ಹರಡುವುದಕ್ಕೆ ಕಾರಣವಾಗಿದೆ. ಫೆ.08 ರಂದು ಶ್ರೀದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್(ರಿ), ಸಮಿತಿಯ ನೇತೃತ್ವದಲ್ಲಿ ಮುಖಂಡರು, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ನಿರ್ಧರಿಸಿದಂತೆ ಜಾತ್ರೆಯಲ್ಲಿ ದೇವಿ ಹೆಸರಿನಲ್ಲಿ ಪ್ರಾಣಿಬಲಿ, ಕೋಣಬಲಿ ಕೃತ್ಯದಲ್ಲಿ ಭಾಗಿಯಾದವರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ನೋಡಲ್ ಅಧಿಕಾರಿಗಳ ನೇಮಕ
ಶ್ರೀದುರ್ಗಾಂಬಿಕಾ ದೇವಿ ದೇವಸ್ಥಾನ ಾವರಣದಲ್ಲಿ ಪ್ರಾಣಿ ಬಲಿ ತಡೆಯಲು ದಾವಣಗೆರೆ ಉಪ ವಿಭಾಗಾಧಿಕಾರಿ ಮತ್ತು ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರನ್ನೊಳಗೊಂಡ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಶ್ರೀಚೌಡೇಶ್ವರಿದೇವಿ ದೇವಸ್ಥಾನಕ್ಕೆ ದಾವಣಗೆರೆ ತಹಶೀಲ್ದಾರ್ ನೇಮಿಸಲಾಗಿದ್ದು, ಕಾಯಿಪೇಟೆ ಮತ್ತು ವಸಂತಟಾಕೀಸ್ ವ್ಯಾಪ್ತಿಗೆ ಮಹಾನಗರಪಾಲಿಕೆ ಆಯುಕ್ತರನ್ನು ನೇಮಿಸಲಾಗಿದೆ.



