ಡಿವಿಜಿ ಸುದ್ದಿ, ದಾವಣಗೆರೆ: ಸರ್ಕಾರಿ ವೈದ್ಯಾಧಿಕಾರಿಗಳ ನ್ಯಾಯುತವಾದ ಬೇಡಿಕೆ ಈಡೇರಿಸದಿದ್ದರೆ ಸೆ.21 ರಿಂದ ತುರ್ತು ಸೇವೆಯನ್ನು ಹೊರತುಪಡಿಸಿ ಉಳಿದೆಲ್ಲ ಆರೋಗ್ಯ ಸೇವೆ ಸ್ಥಗಿತಗೊಳಿಸುತ್ತೇವೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ದಿಂದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಳ ಸಂಘವು ಸರ್ಕಾರಕ್ಕೆ ಜುಲೈ 22 ರಂದು ಹಲವು ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಮನವಿಯನ್ನು ಸಲ್ಲಿಸಿದ್ದು, ಆಗಸ್ಟ್ 15 ರೊಳಗೆ ನ್ಯಾಯಯುತ ಬೇಡಿಕೆಗಳು ಈಡೇರದ ಪಕ್ಷದಲ್ಲಿ ಹಂತ ಹಂತವಾಗಿ ಮುಷ್ಕರದ ಮೊರೆ ಹೋಗುವುದಾಗಿ ಸರ್ಕಾರದ ಗಮನಕ್ಕೆ ತರಲಾಗಿತ್ತು.ಆದರೆ ಇದುವರೆಗೂ ನಮ್ಮ ಬೇಡಿಕೆಗಳು ಈಡೇರಿರುವುದಿಲ್ಲ.
ಸೆ.14 ರಿಂದ ಇಲಾಖೆಯ ಕಾರ್ಯಕ್ರಮ ಅನುಷ್ಟಾನದ ಬಗ್ಗೆ ಸರ್ಕಾರಕ್ಕೆ ನೀಡುತ್ತಿರುವ ವರದಿಗಳನ್ನು ಸ್ಥಗಿತಗೊಳಿಸಿ ಆರೋಗ್ಯ ಸೇವೆಗಳನ್ನು ನೀಡುವುದು ಹಾಗೂ ಸೆ.21 ರಿಂದ ತುರ್ತು ಸೇವೆಯನ್ನು ಹೊರತುಪಡಿಸಿ ಉಳಿದೆಲ್ಲ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸುತ್ತೇವೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ಎಲ್.ನಾಗರಾಜ್ ಮನವಿಯಲ್ಲಿ ತಿಳಿಸಿದ್ದಾರೆ.



