ಡಿವಿಜಿ ಸುದ್ದಿ, ದಾವಣಗೆರೆ: ಮಹಾನಗರ ಪಾಲಿಕೆ ಮಾಜಿ ಸದಸ್ಯ ದಿನೇಶ್ ಶೆಟ್ಟಿ ಕಮಿಷನ್ ಪಡೆಯುವುದರಲ್ಲಿ ಅನುಭವಿಗಳಾಗಿದ್ದಾರೆ. ನಾವು, ಅನಾನುಭವಿಗಳಾಗಿದ್ದರೂ ಉತ್ತಮ ಆಡಳಿತ ಕೊಡುವುದಷ್ಟೇ ನಮ್ಮ ಗುರಿ ಎಂದು ಉಪ ಮೇಯರ್ ಸೌಮ್ಯ ನರೇಂದ್ರ ಕುಮಾರ್ ಹೇಳಿದರು.
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಅನಾನುಭವಿಗಳು ಆಡಳಿತ ನಡೆಸುತ್ತಿದ್ದಾರೆ ಎನ್ನುವ ದಿನೇಶ್ ಶೆಟ್ಟಿ ಹೇಳಿಕೆಗೆ ಪ್ರತಿಕ್ರಿಯಿಸಿದ ಉಪಮೇಯರ್, ದಿನೇಶ್ ಶೆಟ್ಟಿ ಅವರು ಕಮಿಷನ್ ಪಡೆದು ಸಾಕಷ್ಟು ಅನುಭವ ಗಳಿಸಿದ್ದಾರೆ. ಆದರೆ, ನಾವು ಆ ರೀತಿಯಲ್ಲ. ನಮಗೆ ಅನುಭವ ಕಡಿಮೆ ಇದ್ದರೂ, ಉತ್ತಮ ಆಡಳಿತ ನೀಡುವುದಷ್ಟೇ ನಮ್ಮ ಕರ್ತವ್ಯ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಾಲಿಕೆಯಲ್ಲಿ ಉಪಮೇಯರ್ ಲೆಕ್ಕಕ್ಕೆ ಇಲ್ಲ. ಯಾವುದೇ ಸಭೆಗೆ ಆಹ್ವಾನಿಸಲ್ಲ ಎನ್ನುವ ಮೂಲಕ ದಿನೇಶ್ ಶೆಟ್ಟಿ ನಮ್ಮಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಇದು ಅನುಭವಿ ರಾಜಕಾರಣಿಯ ಲಕ್ಷಣ ಅಲ್ಲ. ಸೋಲಿನ ಹತಾಶೆಯಲ್ಲಿರುವ ದಿನೇಶ್ ಶೆಟ್ಟಿ ಈ ರೀತಿ ಮಾತನಾಡುತ್ತಿದ್ದಾರೆ. ಅವರು ಜನಾದೇಶವನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಬೇಕು. ಈ ಮೂಲಕ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿಳಿಸಿದರು.
ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್. ಟಿ. ವಿರೇಶ್ ಮಾತನಾಡಿ, ದಿನೇಶ್ ಶೆಟ್ಟಿ ಉಪ ಮೇಯರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದು ಖಂಡನೀಯ. ಆಡಳಿತ ಪಕ್ಷಕ್ಕೆ ಇರುವಷ್ಟೇ ಜವಾಬ್ದಾರಿ ವಿರೋಧ ಪಕ್ಷಗಳಿಗೂ ಇರುತ್ತದೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ರೀತಿ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.
ಸೋಲುವುದು ಸಾಮಾನ್ಯ ಅದನ್ನು ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸುವುದು ಮುಖ್ಯ. ನಗರದ ಅಭಿವೃದ್ಧಿಗೆ ಸಲಹೆ, ಸಹಕಾರ ನೀಡಿ. ಅದು ನಿಮ್ಮಲ್ಲಿನ ನಿಜವಾದ ಜನಪರ ಕಾಳಜಿಯಾಗುತ್ತದೆ ಎಂದರು.



