ಡಿವಿಜಿಸುದ್ದಿ.ಕಾಂ, ದಾವಣಗೆರೆ: ಚಿಕ್ಕಮಗಳೂರಿನಲ್ಲಿರುವ ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸಬೇಕೆಂದು ಆಗ್ರಹಿಸಿ ಶ್ರೀರಾಮಸೇನೆ ಕಾರ್ಯಕರ್ತರು ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತದಲ್ಲಿರುವ ಶ್ರೀಗುರು ದತ್ತಾತ್ರೇಯರ ಪವಿತ್ರ ತಪೋಭೂಮಿಯನ್ನು ಕೆಲ ಆಕ್ರಮಣಕಾರರು ಆಕ್ರಮಿಸಿಕೊಂಡಿದ್ದಾರೆ. ಅಲ್ಲದೆ ಬಾಬಾಬುಡನ್ ಗಿರಿ ಎಂದು ಹೇಳುತ್ತಿರುವುದು ಖಂಡನೀಯ. ಇತಿಹಾಸಕ್ಕೆ ಸತ್ಯಬಗೆಯುವ ದ್ರೋಹ ಇದಾಗಿದೆ. ಬಾಬಾಬುಡನ್ ದರ್ಗಾ ನಾಗೇನಹಳ್ಳಿಯಲ್ಲಿದೆ.
ಈ ಬಗ್ಗೆ ಸರ್ಕಾರದ ದಾಖಲೆಗಳೆ ಸಾಕ್ಷಿಯಾಗಿದೆ. ಇನಾಂ ದತ್ತಾತ್ರೇಯ ಪೀಠ ಎಂದು ಸರ್ಕಾರಿ ದಾಖಲೆಯಲ್ಲಿ ನಮೂದಾಗಿದೆ. ಜೊತೆಗೆ ನ್ಯಾಯಾಲಯದ 7 ತೀರ್ಪುಗಳು ಸಹ ಇದಕ್ಕೆ ಪುಷ್ಟಿ ನೀಡಿದೆ. ಇಷ್ಟೆಲ್ಲಾ ದಾಖಲೆ, ತೀರ್ಪು, ಇತಿಹಾಸವಿದ್ದರು ಸಹ ಹಿಂದು ಭಕ್ತರಿಗೆ ದ್ರೋಹ ಬಗೆದು ಪೀಠ ಒಪ್ಪಿಸದಿರುವುದು ಖಂಡನೀಯ ಎಂದರು.
ದತ್ತಪೀಠವನ್ನು ಸಂಪೂರ್ಣವಾಗಿ ಹಿಂದುಗಳಿಗೆ ಒಪ್ಪಿಸಬೇಕು. ಪೀಠದಲ್ಲಿರುವ ಅನಧಿಕೃತ ಘೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರಿಸಬೇಕು. ಹಿಂದು ಅರ್ಚಕರನ್ನು ನೇಮಿಸಿ ಮುಜಾವರರನ್ನು ತೆಗೆಯಬೇಕು. ತ್ರಿಕಾಲ ಪೂಜೆ ನಡೆಸಬೇಕು, ಪೀಠದ ನೂರಾರು ಎಕರೆ ಅತಿಕ್ರಮಣ ತೆರವುಗೊಳಿಸಬೇಕು ಹಾಗೂ ಅಮೂಲ್ಯ ವಸ್ತುಗಳು ಕಣ್ಮರೆಯಾದ ಬಗ್ಗೆ ತನಿಖೆ ನಡೆಸಬೇಕು. ಭಕ್ತರಿಗೆ, ಸ್ವಾಮೀಜಿಗಳಿಗೆ ಅಡೆತಡೆ ಇಲ್ಲದೆ ದರ್ಶನ, ಪೂಜೆಗೆ ಮುಕ್ತ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪರಶುರಾಮ್ ನಡುಮನಿ, ವಿನೋದ್ ರಾಜ್ ಡಿ.ಬಿ, ಅರವಿಂದ್, ನೂತನ್ ಆಚಾರ್ಯ, ಕುಮಾರ್ ನಾಯ್ಕ್, ಅಂಜನಿ, ಚಿತ್ರಲಿಂಗ, ಚೇತನ್, ತಿಪ್ಪೇಶ್, ಆಕಾಶ್, ಕಿರಣ್, ನಿಂಗರಾಜ್, ಚಂದನ್ ಮತ್ತಿತರರಿದ್ದರು.