ಡಿವಿಜಿ ಸುದ್ದಿ , ದಾವಣಗೆರೆ: ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನಾ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಯಾವುದೇ ಮಧ್ಯವರ್ತಿಗಳು ಒಡ್ಡುವ ಆಮಿಷಗಳಿಗೆ ಬಲಿಯಾಗಬಾರದು, ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರು ಸೂಚನೆ ನೀಡಿದ್ದಾರೆ.
ಪ್ರಧಾನಮಂತ್ರಿಗಳ ಉದ್ಯೋಗ ಸೃಜನೆ ಯೋಜನೆಯಡಿ ಸ್ಥಳೀಯ ಹಣಕಾಸು, ಬ್ಯಾಂಕ್‍ಗಳಿಂದ ಆರ್ಥಿಕ ಸಹಾಯ ಪಡೆದು ಉತ್ಪನ್ನ ಮತ್ತು ಸೇವಾ ಚಟುವಟಿಕೆಗಳನ್ನು ಕೈಗೊಳ್ಳಲು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 2020-21ನೇ ಸಾಲಿಗೆ ಸಂದರ್ಶನ ಇರುವುದಿಲ್ಲ. ಸ್ಕೋರ್ ಕಾರ್ಡ್ ಆಧಾರದ ಮೇಲೆ ಅರ್ಹತೆ ಇದ್ದವರಿಗೆ ಸಾಲ ಸೌಲಭ್ಯಕ್ಕೆ ಬ್ಯಾಂಕಿಗೆ ಶಿಫಾರಸ್ಸು ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಮಧ್ಯವರ್ತಿಗಳು ಇಲಾಖೆಯಿಂದ ಯಾವುದೇ ಸಂದರ್ಶನವಿಲ್ಲದೆ ತಮ್ಮ ಅರ್ಜಿಯನ್ನು ಬ್ಯಾಂಕಿಗೆ ಶಿಫಾರಾಸ್ಸು ಮಾಡಿಸಿ ಸಾಲ ಮಂಜೂರು ಮಾಡಿಸಿಕೊಡುವುದಾಗಿ ಅಮಿಷಗಳನ್ನು ತೋರಿಸಿ, ಬಡ ಫಲಾನುಭವಿಗಳಿಂದ ಹಣ ಪಡೆದು ವಂಚಿಸುತ್ತಿರುವ ಬಗ್ಗೆ ಕಚೇರಿಯ ಗಮನಕ್ಕೆ ಬಂದಿರುತ್ತದೆ. ಹೀಗಾಗಿ ಅರ್ಜಿ ಸಲ್ಲಿಸಿರುವವರು, ಮಧ್ಯವರ್ತಿಗಳು ತೋರಿಸುವ ಯಾವುದೇ ಅಮಿಷಗಳಿಗೆ ಬಲಿಯಾಗದೇ, ನೇರವಾಗಿ ಕಚೇರಿಗೆ ಬಂದು ಭೇಟಿ ಮಾಡಬೇಕೆಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.



