ಡಿವಿಜಿ ಸುದ್ದಿ, ದಾವಣಗೆರೆ: ಸಾವರ್ಕರ್ ಗೆ ಭಾರತ ರತ್ನ ನೀಡುವ ಹೇಳಿಕೆ ವಿರೋಧಿಸಿದ್ದಕ್ಕೆ ಪದೇ ಪದೇ ಕೊಲೆ ಬೆದರಿಕೆ ಬರುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸಾವರ್ಕರ್ ಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಲು ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು. ಇದನ್ನು ವಿರೋಧಿಸಿದ್ದಕ್ಕೆ ಎರಡು ಬಾರಿ ಫೋನ್ ಮೂಲಕ ಮತ್ತು ನಾಲ್ಕು ಬಾರಿ ಕೊಲೆ ಬೆದರಿಕೆ ಪತ್ರ ಬರೆಯುವ ಮೂಲಕ ಬೆದರಿಕೆ ಹಾಕಿದ್ದಾರೆ ಎಂದರು .
ಈ ಬಾರಿ ಕೊನೆಯ ಎಚ್ಚರಿಕೆ ಯಾಗಿದ್ದು ಈ ತಿಂಗಳ 28ರ ಒಳಗಾಗಿ ಕ್ಷಮೆ ಕೇಳದಿದ್ದರೆ, ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿ ಪತ್ರ ಬರೆದಿದ್ದಾರೆ. ಈ ಬಗ್ಗೆ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು, ಯಾವುದೇ ರೀತಿಯ ಕ್ರಮ ತೆಗೆದುಕೊಂಡಿರುವುದಿಲ್ಲ.
ಇಂದು ಮತ್ತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದ್ದು, ಅದರ ಪ್ರತಿಯನ್ನು ಮುಖ್ಯಮಂತ್ರಿಗಳಿಗೆ, ಗೃಹ ಸಚಿವರಿಗೆ ಹಾಗೂ ಪಕ್ಷದ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರುಗಳಿಗೆ ಕಳುಹಿಸಲಾಗುವುದು. ಕೋಮುವಾದಿಗಳ ಬೆದರಿಕೆಗೆ ಜಗ್ಗದೆ, ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳ ಪರ ಹೋರಾಡಲು ಪ್ರಾಣ ನೀಡಲು ಸಿದ್ಧ ಎಂದರು.
ಈ ಸಂದರ್ಭದಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯ ಹಿರಿಯ ಸದಸ್ಯರುಗಳಾದ ಕೆ. ಚಮನ್‌ಸಾಬ್, ಪಿ.ಎಸ್. ನಾಗರಾಜ್, ಜಿ.ಡಿ.ಪ್ರಕಾಶ್, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಮುಖಂಡ ಹುಲ್ಲುಮನಿ ಗಣೇಶ್, ಕರ್ನಾಟಕ ರಾಜ್ಯ ಸಮಾಜಿಕ ಜಾಲತಾಣದ ಕಾರ್ಯದರ್ಶಿ ರಘು ದೊಡ್ಡಮನಿ, ಕೆ.ಎಲ್. ಹರೀಶ್ ಬಸಾಪುರ, ಸೋನಿಯಾ ಬಿಗ್ರೆಡ್‌ನ ಜಿಲ್ಲಾಧ್ಯಕ್ಷ ಬಾತಿ ಶಿವಕುಮಾರ್ ಕಣ್ಣಪ್ಪಳ, ಬಿ.ಹೆಚ್. ಉದಯ್ ಕುಮಾರ್, ಡಿ. ಶಿವಕುಮಾರ್, ಡಿ.ಹೆಚ್. ಮಲ್ಲಿಕಾರ್ಜುನ್ ಇತರರು ಹಾಜರಿದ್ದರು.



