ಡಿವಿಜಿ ಸುದ್ದಿ, ದಾವಣಗೆರೆ: ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿರುವ ಜಾಲಿನಗರ ಕಂಟೈನ್ ಮೆಂಟ್ ಝೋನ್ ಗಳಿಗೆ ಅಗತ್ಯ ವಸ್ತು ಪೂರೈಸುವಲ್ಲಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ವಿಫಲವಾಗಿದೆ ಎಂದು ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಲಿನಗರ ವಾರ್ಡ್ ನಲ್ಲಿ ಏಳೆಂಟು ಕಂಟೈನ್ ಮೆಂಟ್ ಝೋನ್ ಗಳಿವೆ. ಒಂದೊಂದು ಕಂಟೈನ್ ಮೆಂಟ್ ಝೋನ್ ನಲ್ಲಿ 50 ರಿಂದ 60 ಮನೆಗಳಿವೆ. ಈ ಪ್ರದೇಶಗಳು ಕಳೆದ 2 ತಿಂಗಳಿಂದ ಸೀಲ್ ಡೌನ್ ಆಗಿವೆ. ಇಲ್ಲಿನ ಜನ ಪ್ರತಿ ದಿನ ದುಡಿದರಷ್ಟೇ ಅವರ ಬಳಿ ಹಣ. ಕಳೆದ ಎರಡು ತಿಂಗಳಿಂದ ಯಾವುದೇ ದುಡಿಮೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಅವರಿಗೆ ಅಗತ್ಯ ವಸ್ತುಗಳಾದ ತರಕಾರಿ,ಹಾಲು, ರೇಷನ್ ಕಿಟ್ ಗಳನ್ನಾದರೂ ಜಿಲ್ಲಾಡಳಿತ ಮತ್ತು ಪಾಲಿಕೆ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.
ದಾವಣಗೆರೆಯಲ್ಲಿ 3 ಕೊರೊನಾ ಲ್ಯಾಬ್ ಗಳಿದ್ದು, ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಹೆಚ್ಚಾಗುತ್ತಿದ್ದಾರೆ. ಹೀಗಾಗಿ ಎಲ್ಲಾ ವಾರ್ಡ್ ಗಳಲ್ಲಿ ಮಾದರಿ ಪರೀಕ್ಷೆಗೆ ಮುಂದಾಗಬೇಕು. ಜಿಲ್ಲೆಯ ಮೂರು ಟೆಸ್ಟಿಂಗ್ ಲ್ಯಾಬ್ ಗಳಲ್ಲಿ 300 ಟೆಸ್ಟ್ ಮಾಡುವ ಸಾಮರ್ಥ್ಯ ಇದೆ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ದೇವರಮನೆ ಶಿವಕುಮಾರ್, ಗಡಿಗುಡಾಳ್ ಮುಂಜುನಾಥ್, ಕೆ. ಚಮನ್ ಸಾಬ್, ವಿನಾಯಕ್ ಪೈಲ್ವಾನ್ , ಸೈಯದ್ ಚಾರ್ಲಿ ಉಪಸ್ಥಿತರಿದ್ದರು.



