ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಪತ್ತೆಯಾಗಿದ್ದ 3 ಕೊರೊನಾ ವೈರಸ್ ಪ್ರಕರಣದಲ್ಲಿ ಇಬ್ಬರು ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಇಡೀ ಜಗತ್ತಿನಲ್ಲಿಯೇ ತಲ್ಲಣ ಸೃಷ್ಠಿ ಮಾಡಿದ್ದ ಕೊರೊನಾ ವೈಸರ್ , ಜಿಲ್ಲೆಯಲ್ಲಿ ಮೂರು ಪ್ರಕರಣಗಳು ಪತ್ತೆಯಾಗಿದ್ದವು. ಇಡೀ ದೇಶದಾದ್ಯಂತ ಲಾಕ್ ಡೌನ್ ಹೇರಲಾಗಿದ್ದು, ಜಿಲ್ಲಾಡಳಿತದ ಕಟ್ಟು ನಿಟ್ಟಿನ ಕ್ರಮದಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿಲ್ಲ. ಸೋಂಕಿತರಾಗಿದ್ದ ಮೂವರಲ್ಲಿ ಇಬ್ಬರ ಗುಣಮುಖರಾಗಿದ್ದಾರೆ. ಈ ಮೂಲಕ ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತಾಗಿದೆ.
ಮಾರ್ಚ್ 04 ರಿಂದ ಇದುವರೆಗೆ 381 ಜನರು ಜಿಲ್ಲೆಯಿಂದ ವಿದೇಶ ಪ್ರಯಾಣ ಮಾಡಿ ಬಂದಿದ್ದು, 28 ದಿನಗಳ ಅವಲೋಕನ ಅವಧಿಯನ್ನು 131 ಜನರು ಪೂರ್ಣಗೊಳಿಸಿದ್ದಾರೆ. 214 ಜನರು 14 ದಿನಗಳ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಒಟ್ಟು 24 ಜನರನ್ನು ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಲ್ಪಟ್ಟಿದ್ದು, 35 ಜನರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಇದುವರೆಗೂ 34 ಜನರು ಸೂಕ್ತ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಹೊರದೇಶಗಳಲ್ಲಿ ಶಾಶ್ವತವಾಗಿ ನೆಲೆಸಿರುವ ವಿದೇಶಿಗರು ಜಿಲ್ಲೆಗೆ ಬಂದು ಮತ್ತೆ ಹೊರದೇಶಗಳಿಗೆ ಇದುವರೆಗೆ 10 ಜನರು ತೆರಳಿದ್ದಾರೆ. ವಿದೇಶಗಳಿಗೆ ಭೇಟಿ ನೀಡಿ ನಮ್ಮ ಜಿಲ್ಲೆಗೆ ಬಂದು ಇತರೆ ಜಿಲ್ಲೆಗಳಿಗೆ ಇದುವರೆಗೆ 17 ಜನ ತೆರಳಿರುತ್ತಾರೆ. ಕೊರೋನಾ ವೈರಸ್ ಪರೀಕ್ಷೆಗಾಗಿ 67 ಮಾದರಿಗಳನ್ನು ಇದುವರೆಗೆ ಕಳುಹಿಸಲಾಗಿದ್ದು, 59 ಮಾದರಿಗಳು ನೆಗೆಟಿವ್ ಎಂದು ಫಲಿತಾಂಶ ಬಂದಿರುತ್ತದೆ. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಖಚಿತಪಟ್ಟ ಮೂರು ಪ್ರಕರಣಗಳ ಪೈಕಿ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು ಇನ್ನೊಬ್ಬರು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.



