ಬಾಷನಗರ, ಜಾಲಿನಗರ ಕೊರೊನಾ ನಂಜಿಗೆ ಕೊನೆ ಇಲ್ಲ‌: 14 ಹೊಸ ಪ್ರಕರಣ, ಇನ್ನು 257 ವರದಿ ಬಾಕಿ; ಸೋಂಕಿತರ ಸಂಖ್ಯೆ 61ಕ್ಕೆ ಏರಿಕೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆಯಲ್ಲಿ ಇಂದು ಹೊಸದಾಗಿ 14 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಈ ಎಲ್ಲ 14 ಪ್ರಕರಣಗಳು ರೋಗಿ ಸಂಖ್ಯೆ 533 ಮತ್ತು 556 ರ ದ್ವಿತೀಯ ಸಂಪರ್ಕದವರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ಪಾಸಿಟಿವ್ ಬಂದವರನ್ನು ಈಗಾಗಲೇ ಪ್ರತ್ಯೇಕವಾಗಿ ಕ್ವಾರಂಟೈನ್ ಮಾಡಲಾಗಿದ್ದು ಮೂರು ದಿನಗಳ ಹಿಂದೆ ಇವರ ಗಂಟಲುದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಒಟ್ಟು 141 ವರದಿಗಳು ನೆಗೆಟಿವ್ ಬಂದಿದ್ದು, 14 ಪಾಸಿಟಿವ್ ಬಂದಿವೆ.ಇದುವರೆಗೆ 1500 ಗಂಟಲುದ್ರವ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 1243 ವರದಿಗಳು ನೆಗೆಟಿವ್ ಎಂದು ಬಂದಿವೆ. 61 ಪಾಸಿಟಿವ್ ಬಂದಿದ್ದು ಈ ಪೈಕಿ 02 ಪ್ರಕರಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರೆ, 4 ಜನರು ಸಾವನ್ನಪ್ಪಿದ್ದಾರೆ. ಸದ್ಯ 55 ಸಕ್ರಿಯ ಪ್ರಕರಣಗಳಲ್ಲಿ ರೋಗಿಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಒಟ್ಟು 150 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 257 ವರದಿಗಳು ಬರುವುದು ಬಾಕಿ ಇದೆ ಎಂದರು.

davangere dc mahnthes beelagi dvgsuddi
ಇಂದು ಪಾಸಿಟಿವ್ ಬಂದಿರುವ 14 ಪ್ರಕರಣಗಳಲ್ಲಿ 4 ಸೋಂಕಿತರು ರೋಗಿ ಸಂಖ್ಯೆ 533 ರ ದ್ವಿತೀಯ ಸಂಪರ್ಕಗಳಾಗಿದ್ದರೆ ಇನ್ನುಳಿದ 10 ಜನರು ರೋಗಿ ಸಂಖ್ಯೆ 556 ರ ದ್ವಿತೀಯ ಸಂಪರ್ಕದಲ್ಲಿದ್ದವರಾಗಿದ್ದಾರೆ. ಪ್ರಸ್ತುತ ಇರುವ ಜಾಲಿನಗರ, ಬಾಷಾನಗರ, ಇಮಾಮ್‍ನಗರ, ಕೆಟಿಜೆ ನಗರ, ಬೇತೂರು ರಸ್ತೆ ಮತ್ತು ಎಸ್‍ಪಿಎಸ್ ನಗರ ಈ ಆರು ಕಂಟೈನ್‍ಮೆಂಟ್ ಝೋನ್‍ಗಳಲ್ಲಿ ಪ್ರತಿನಿತ್ಯ ಪ್ರತಿ ಮನೆಗಳಿಗೆ ಆರೋಗ್ಯ ಸಿಬ್ಬಂದಿಗಳು ತೆರಳಿ ಸಕ್ರಿಯ ಸರ್ವೇಕ್ಷಣಾ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಯಾವುದನ್ನು ಮರೆಮಾಚಬೇಡಿ: ರೋಗ ಉಲ್ಬಣಗೊಂಡು ಕೊನೆಯ ಹಂತದಲ್ಲಿ ಆಸ್ಪತ್ರೆಗೆ ಬಂದರೆ ಯಾರೂ ಏನೂ ಮಾಡಲು ಸಾದ್ಯವಿಲ್ಲ. ಆದ್ದರಿಂದ ಸಾರ್ವಜನಿಕರು ನಮ್ಮ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಗಳು ಸರ್ವೇ ಕಾರ್ಯಕ್ಕೆ ಬಂದ ವೇಳೆ ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯವನ್ನು ಮುಚ್ಚಿಡದೇ ಮಾಹಿತಿ ನೀಡಬೇಕು. ರೋಗ ಲಕ್ಷಣ ಕಂಡ ಕೂಡಲೇ ಆಸ್ಪತ್ರೆಗೆ ಬಂದಲ್ಲಿ ನಿಮ್ಮನ್ನು ಕಾಪಾಡುವ ಹೊಣೆ ನಮ್ಮದಾಗಿರುತ್ತದೆ. ನಮ್ಮಲ್ಲಿ ಸಮರ್ಥ ವೈದ್ಯರೂ ಇದ್ದಾರೆ. ಆದ್ದರಿಂದ ರೋಗ ಕೊನೆಯ ಹಂತಕ್ಕೆ ಬಂದಾಗ ಬರುವುದನ್ನು ಬಿಟ್ಟು, ಆರಂಭಿಕ ಲಕ್ಷಣಗಳು ಕಂಡು ಬಂದಾಗಲೇ ಆಸ್ಪತ್ರೆಗೆ ಬರಬೇಕೆಂದು ಮನವಿ ಮಾಡುತ್ತೇನೆ ಎಂದರು.

ಪ್ರಸ್ತುತ ಜಿಲ್ಲಾಸ್ಪತ್ರೆಯಲ್ಲಿ 15 ತೀವ್ರ ಉಸಿರಾಟದ ತೊಂದರೆ ಉಳ್ಳ ರೋಗಿಗಳಿದ್ದು ಇವರನ್ನು ತಪಾಸಣೆ ನಡೆಸಲು ಜಿಲ್ಲಾಸ್ಪತ್ರೆಯಲ್ಲಿ ಚಿಗಟೇರಿ ಆಸ್ಪತ್ರೆ ವೈದ್ಯರನ್ನು ಹೊರತುಪಡಿಸಿ ನಾಲ್ಕು ಜನರ ತಜ್ಞ ವೈದ್ಯರ ತಂಡವನ್ನು ರಚಿಸಲಾಗಿದ್ದು, ಈ ವೈದ್ಯರು ದಿನದಲ್ಲಿ 3 ಬಾರಿ ಈ ರೋಗಿಗಳ ತಪಾಸಣೆ ಮಾಡುತ್ತಿದ್ದಾರೆ. ಹಾಗೂ ಮಕ್ಕಳನ್ನು ಮಕ್ಕಳ ತಜ್ಞ ವೈದ್ಯರು ಲಕ್ಷಣಗಳನುಸಾರ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಇನ್ನೂ ಹೆಚ್ಚುವರಿಯಾಗಿ ಬಾಪೂಜಿ, ಎಸ್‍ಎಸ್ ಆಸ್ಪತ್ರೆ ಸೇವೆಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ಅನಿವಾರ್ಯವಾಗಿ ಕೆಲವು ಸೇವೆಗಳನ್ನು ನಿಲ್ಲಿಸಲಾಗಿದ್ದು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಇತರೆ ಆಸ್ಪತ್ರೆಗಳು ಈ ಸೇವೆಗಳನ್ನು ನೀಡಬೇಕೆಂದು ಸೂಚಿಸಲಾಗಿದೆ ಎಂದರು.

ಜಿಲ್ಲೆಯನ್ನು ಮೊದಲು ಇದ್ದ ಸ್ಥಿತಿಗೆ ತರಲು ನಮ್ಮ ಎಲ್ಲ ತಂಡಗಳು ಸನ್ನದ್ದವಾಗಿದ್ದು, ಸಾರ್ವಜನಿಕರು ಸಹಕರಿಸಬೇಕೆಂದರು. ಈ ಸಂದರ್ಭದಲ್ಲಿ ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಇದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *