ಡಿವಿಜಿ ಸುದ್ದಿ, ದಾವಣಗೆರೆ: ವಾಟ್ಸಾಪ್‍ನಲ್ಲಿ ಜಿಲ್ಲಾಸ್ಪತ್ರೆ ಮತ್ತು ಜಿಲ್ಲಾಸರ್ಜನ್ನರ ಕುರಿತು ಆಕ್ಷೇಪಣಾರ್ಹವಾಗಿ ಮಾತನಾಡಲಾದ ಆಡಿಯೋ ಕ್ಲಿಪ್ ಹರಿದಾಡುತ್ತಿದೆ. ಇದು ಸುಳ್ಳು ಮತ್ತು ತಪ್ಪು ಮಾಹಿತಿಯಾಗಿದೆ. ಆಸ್ಪತ್ರೆಯಲ್ಲಿ ಡಿಎಸ್ ಸೇರಿದಂತೆ ವೈದ್ಯರು ಹಾಗೂ ಎಲ್ಲ ಸಿಬ್ಬಂದಿ ತಮ್ಮ ಕುಟುಂಬದಿಂದ ದೂರ ಇದ್ದು ಹಗಲಿರುಳೂ ಕೋವಿಡ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವುದು ಸರಳ ವಿಚಾರವಲ್ಲ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಅವರನ್ನು ಹುರುದುಂಬಿಸುವ ಬದಲು ಈ ರೀತಿ ದುರುದ್ದೇಶದಿಂದ ಬೇಜವಾಬ್ದಾರಿಯಾಗಿ ಸುಳ್ಳು ಮತ್ತು ತಪ್ಪು ಮಾಹಿತಿ ಹರಿದಾಡಿಸುತ್ತಿರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ ಪಿ ಹನುಮಂತರಾಯ ತಿಳಿಸಿದರು.

ಜಿಲ್ಲಾಸ್ಪತ್ರೆ ಮತ್ತು ಡಿಎಸ್ ಬಗ್ಗೆ ಈ ರೀತಿ ತಪ್ಪು ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ ಗಿರೀಶ್ ದೇವರಮನಿ ಎಂಬುವವರನ್ನು ದಸ್ತಗಿರಿ ಮಾಡಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಾಗೂ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಮತ್ತೊಂದು ಆಡಿಯೋ ಕ್ಲಿಪ್ ಇತ್ತೀಚೆಗೆ ಹರಿದಾಡುತ್ತಿದ್ದು,ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಇಂಜಿನಿಯರ್ ವಿನಯ್ ಮತ್ತು ಆತನ ಸಹಪಾಠಿ ಸಂತೋಷ್ ಕಠಾರಿಯಾ ಇವರ ವಿರುದ್ದವೂ ವಿದ್ಯಾನಗರ ಮತ್ತು ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜನರು ಈ ರೀತಿಯ ಗಾಳಿ, ತಪ್ಪು ಸುದ್ದಿಗಳಿಗೆ ಕಿವಿಗೊಡಬಾರದೆಂದು ಮನವಿ ಮಾಡುತ್ತೇನೆ. ಸಾರ್ವಜನಿಕರು ತಮ್ಮ ಪಾತ್ರ ಅಂದರೆ ಮನೆಯಲ್ಲೇ ಇದ್ದು, ಹೊರಗೆ ಅಕಸ್ಮಾತ್ ಬಂದಲ್ಲಿ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಬೇಕು. ಸರ್ಕಾರ ಅನೇಕ ಸೂಚನೆ, ಸುತ್ತೋಲೆ, ಆಪ್ತಮಿತ್ರ, ಸೇವಾ ಸಿಂಧು ಇ-ಪಾಸ್ ಈ ರೀತಿಯ ಸೌಲಭ್ಯಗಳನ್ನು ನೀಡಿದ್ದು ಇವುಗಳ ಸದ್ಬಳಕೆ ಮಾಡಿಕೊಳ್ಳಬೇಕು. ಆದರೆ ತಪ್ಪು ಸುದ್ದಿಗೆ ಕಿವಿಗೊಡದೆ, ಹರಡಬಾರದು. ಈ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದವರ ವಿರುದ್ದ ಕಠಿಣ ಕ್ರಮ ಕಟ್ಟಿಟ್ಟ ಬುತ್ತಿ ಎಂದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಏನು ಸುದ್ದಿ ಹರಡಿದರೂ ನಡೆಯುತ್ತಿದೆ ಎಂಬ ಮನೋಭಾವ ಬಿಡಬೇಕು. ಈ ರೀತಿ ಮಾಡಿದವರ ವಿರದ್ದ ಕಠಿಣ ಕ್ರಮ ಜರುಗಿಸುತ್ತೇವೆ. ಮೊನ್ನೆ ಸಹ ಡಿಹೆಚ್‍ಓ ರವರಿಗೆ ಬಾಡಾದ ಸಾರ್ವಜನಿಕರೋರ್ವರು ಕರೆ ಮಾಡಿ ಅಸಭ್ಯವಾಗಿ ಮಾತನಾಡಿದ್ದಾರೆ. ಅವರ ವಿರುದ್ದವೂ ಕ್ರಮ ಕೈಗೊಳ್ಳಲಾಗುವುದು ಎಂದರು.
ದಾವಣಗೆರೆಯಿಂದ ಅಗತ್ಯ ವಸ್ತುಗಳನ್ನು ಸಾಗಿಸುವ ಲಾರಿಗಳಿಗೆ ಗ್ರಾಮೀಣ ಭಾಗದಲ್ಲಿ ಜನರು ತೊಂದರೆ ಕೊಡಬಾರದು. ದಾರಿಗೆ ಅಡ್ಡ ಮಣ್ಣು, ಬೇಲಿ ಹಾಕುವುದು ಮಾಡಬಾರದು ಎಂದು ಮನವಿ ಮಾಡಿದರು.ಪತ್ರಿಕಾಗೋಷ್ಟಿಯಲ್ಲಿ ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್ ಇದ್ದರು.



