ಡಿವಿಜಿ ಸುದ್ದಿ, ದಾವಣಗೆರೆ: ಕೆಟಿಜೆ ನಗರದ ಕಂಟೈನ್‍ಮೆಂಟ್ ಜೋನ್‍ನಲ್ಲಿ ಕಳೆದ 28 ದಿನಗಳಿಂದ ಒಂದೂ ಪ್ರಕರಣ ದಾಖಲಾಗದ ಹಿನ್ನೆಲೆ ನಿಯಮಾನುಸಾರ ತೆರವು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ಸಂಪರ್ಕದ ಕೊಂಡಿಗಳನ್ನು ಬೇರ್ಪಡಿಸುವ ಕೆಲಸ ಮಾಡಲಾಗುತ್ತಿದ್ದರೂ ಸಹ ಜಿಲ್ಲೆಯಲ್ಲಿ ಅಲ್ಲೊಂದು ಇಲ್ಲೊಂದು ಪ್ರಕರಣ ಕಂಡುಬರುತ್ತಿದೆ. ಜಿಲ್ಲಾ ಸರ್ವೇಕ್ಷಣಾ ತಂಡವು ಉತ್ತಮವಾಗಿ ಕೆಲಸ ಮಾಡುತ್ತಿದೆ. ಕೊರೊನಾ ನಿಯಂತ್ರಿಸಲು ಇನ್ನೂ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದರು.
ಅತೀ ಹೆಚ್ಚು ಕೇಸ್‍ಗಳು ಜಾಲಿನಗರ ಹಾಗೂ ಬಾಷಾ ನಗರಕ್ಕೆ ಸಂಬಂಧಿಸಿವೆ. ರೋಗಿ ಸಂಖ್ಯೆ-533 ಮತ್ತು 556 ಇವರಿಗೆ ಸಂಬಂಧಪಟ್ಟ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರನ್ನು 300 ರಿಂದ 400 ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಇದೀಗ ಅವರಿಗೆ ಸಂಬಂಧಪಟ್ಟ ದ್ವಿತೀಯ ಸಂಪರ್ಕದವರಿಗೆ ಕೊರೊನಾ ಪ್ರಕರಣ ಕಂಡು ಬರುತ್ತಿದೆ ಎಂದರು.
ಇದೀಗ ಜಿಲ್ಲೆಯಲ್ಲಿ ಕೊರೊನಾಗೆ ಸಂಬಂಧಪಟ್ಟಂತೆ ಪರಿಸ್ಥಿತಿ ಸುಧಾರಿಸಿದೆ. ಆದಷ್ಟು ಪ್ರಕರಣಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದ್ದು, ಅವರೆಲ್ಲರಿಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಉತ್ತಮವಾದ ಆಹಾರ ಹಾಗೂ ಆಯುಷ್ ಇಲಾಖೆಯ ಉತ್ಪನ್ನಗಳನ್ನು ನೀಡಲಾಗುತ್ತಿದೆ.



